ಬೆಂಗಳೂರು: ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಸಮಜಾಯಿಷಿಯನ್ನು ನೋಡಿದ್ದೇವೆ. ಅಕ್ರಮ ನಡೆದಿಲ್ಲ ಎಂದು ಹೇಳಿದರೆ ನಂಬಲ್ಲ. ನಡೆದಿರುವ ಹಗರಣದ ಬಗ್ಗೆ ತನಿಖೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಮುಡಾದಲ್ಲಿ ಯಾರ ಕಾಲದಿಂದಲಾದರೂ ಅಕ್ರಮ ನಡೆದಿರಲಿ ಮೊದಲು ತನಿಖೆಯಾಗಲಿ. ಸ್ವತ: ಸಚಿವ ಬೈರತಿ ಸುರೇಶ್ ಎಲ್ಲಾ ಕಡತಗಳನ್ನು ತುಂಬಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಕಡತ ತಿದ್ದುವ ಕೆಲಸ ಮಾಡುತ್ತಿದ್ದರಾ? ಯಾರ ಕಣ್ಣಿಗೆ ಮಣ್ಣೆರಚುವ ಕೆಲಸ ನಡೆದಿದೆ? ಎಂದು ಪ್ರಶ್ನಿಸಿದರು.
ಮೂಡಾ ಹಗರಣ ಮೂರುವರೆ ನಾಲ್ಕು ಸಾವಿರ ಕೋಟಿ ಹಗರಣವಾಗಿದ್ದು, ಸಿಎಂ ಸಿದ್ದರಾಮಯ್ಯ ಸ್ವತಃ ಹಣಕಾಸು ಸಚಿವರು. ಮೈಸೂರಿನವರೇ ಆಗಿದ್ದಾರೆ. ಅಕ್ರಮದ ಬಗ್ಗೆ ಸಿಎಂ ಅವರಿಗೆ ಮಾಹಿತಿ ಇಲ್ಲದೇ ನಡೆಯುತ್ತದೆಯೇ? ಭೈರತಿ ಸುರೇಶ್ ಸಿಎಂ ಗೆ ಪರಮಾಪ್ತರಾಗಿದ್ದಾರೆ. ಹಾಗಾಗಿ ಅಕ್ರಮದ ಬಗ್ಗೆ ಸಾಕಷ್ಟು ಅನುಮಾನ ಕಾಡುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ಆಗಬೇಕು.
ಮುಡಾ ಹಗರಣದಲ್ಲಿ ಭಾಗಿಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಕಡತಗಳನ್ನು ತಿದ್ದುಪಡಿ ಮಾಡುತ್ತಿದೆ. ಸಿಎಂ ಪರಮಾಪ್ತ ಸಚಿವರು ಈ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಪ್ರಕರಣದ ಬಗ್ಗೆ ಮೊದಲು ತನಿಖೆ ನಡೆಯಲಿ ಎಂದು ಆಗ್ರಹಿಸಿದರು.