ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಕಡೆ ಗ್ರಾಮಸ್ಥರು ದಿನಕ್ಕೆ ಎರಡು ಪಕ್ಷಗಳನ್ನು ಬದಲಾಯಿಸತೊಡಗಿದ್ದಾರೆ.
ಬೆಳಗ್ಗೆ ಒಂದು ಪಕ್ಷ, ಸಂಜೆ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಿದ್ದಾರೆ. ಶಾಸಕ ಶರತ್ ಬಚ್ಚೇಗೌಡ ಭೇಟಿ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಗ್ರಾಮಸ್ಥರು ನಂತರ ಸಚಿವ ಎಂಟಿಬಿ ನಾಗರಾಜ್ ಮತ್ತು ಅವರ ಪುತ್ರ ನಿತೀಶ್ ಪುರುಷೋತ್ತಮ್ ಗ್ರಾಮಕ್ಕೆ ಭೇಟಿ ನೀಡಿದಾಗ ಸಾಮೂಹಿಕವಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರ ಸಂಸದ ಬಿ.ಎನ್. ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್ ಕುಟುಂಬಗಳ ರಾಜಕೀಯ ಪ್ರತಿಷ್ಠೆಯ ಕಣವಾಗಿದೆ. ಶಾಸಕ ಶರತ್ ಬಚ್ಚೇಗೌಡ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಬಾವುಟ, ಶಾಲು ಹಾಕಿಕೊಂಡು ಓಡಾಡುವ ಗ್ರಾಮಸ್ಥರು, ಎಂಟಿಬಿ ನಾಗರಾಜ್ ಬಂದಾಗ ಬಿಜೆಪಿ ಬಾವುಟ ಮತ್ತು ಬಿಜೆಪಿ ಶಾಲು ಹಾಕಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ.
ಬೆಳಿಗ್ಗೆ ಬಿಜೆಪಿ, ಸಂಜೆ ಕಾಂಗ್ರೆಸ್ ಇಲ್ಲವೇ ಬೆಳಗ್ಗೆ ಕಾಂಗ್ರೆಸ್ ಮತ್ತು ಸಂಜೆ ಬಿಜೆಪಿ ಸೇರ್ಪಡೆಯ ಅಧಿಕೃತ ಕಾರ್ಯಕ್ರಮಗಳು ನಡೆಯುತ್ತಿವೆ. ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಶರತ್ ಬಚ್ಚೇಗೌಡ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಬಿಜೆಪಿ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಶಾಸಕರಾಗಿ ಆಯ್ಕೆಯಾಗಿದ್ದ ಶರತ್ ಬಚ್ಚೇಗೌಡ ಈ ಬಾರಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಎಂಟಿಬಿ ನಾಗರಾಜ್ ಅವರ ಪುತ್ರ ನಿತೀಶ್ ಪುರುಷೋತ್ತಮ್ ಸ್ಪರ್ಧಿಸುವ ಸಾಧ್ಯತೆ ಇದೆ.