ಬೆಂಗಳೂರು: ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ವ್ಯವಸ್ಥೆ ಮರು ಜಾರಿಯಾದ ನಂತರ ರೈತರ ಉತ್ಪನ್ನಗಳಿಗೆ ಬೆಲೆ ಹೆಚ್ಚಳವಾಗಿದೆ. ಎಪಿಎಂಸಿಗಳ ಆದಾಯವೂ ಹೆಚ್ಚಳವಾಗಿದೆ. ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಏಕಕಾಲದಲ್ಲಿ ನಾಲ್ಕು ಬೆಳೆಗಳನ್ನು ಬೆಂಬಲ ಬೆಲೆ ಅಡಿ ಖರೀದಿಸುತ್ತಿದ್ದು, ರೈತರಿಗೆ ಅನುಕೂಲವಾಗಿದೆ. ಇದೇ ಮೊದಲ ಬಾರಿಗೆ ಹೆಸರು ಕಾಳು, ಸೂರ್ಯಕಾಂತಿ, ಸೋಯಾಬಿನ್, ಉದ್ದಿನ ಕಾಳನ್ನು ಏಕಕಾಲದಲ್ಲಿ ಬೆಂಬಲ ಬೆಲೆ ಆಧರಿಸಿ ಖರೀದಿಸುತ್ತಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದ ಈ ನಾಲ್ಕು ಕೃಷಿ ಉತ್ಪನ್ನಗಳ ದರ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಈಗ ರೈತರಿಗೆ ಕೃಷಿ ಮಾರುಕಟ್ಟೆ ಬೆಂಬಲ ಬೆಲೆ ಒದಗಿಸುವ ಜೊತೆಗೆ ರೈತರು ದರ ಕುಸಿತದ ಆತಂಕಕ್ಕೆ ಒಳಗಾಗಿ ಕಡಿಮೆ ದರಕ್ಕೆ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ತಪ್ಪಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಹೆಸರು ಕಾಳಿನ ದರ 6000 ರೂ.ಗೆ ಕುಸಿದಿತ್ತು. ಈಗ 8682 ರೂ. ಬೆಂಬಲ ಬೆಲೆ ಘೋಷಿಸಿದ ನಂತರ ಎರಡು ವಾರದಲ್ಲಿ ಮಾರುಕಟ್ಟೆಯಲ್ಲಿ ಹೆಸರುಕಾಳಿನ ದರ 8000 ರೂ.ಗೆ ಹೆಚ್ಚಳ ಕಂಡಿದೆ. ಎಪಿಎಂಸಿ ಆದಾಯ ಕೂಡ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.