ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ನಲ್ಲಿ ಮಹನೀಯರಾಗಿದ್ದಾರೆ. ಕೊಹ್ಲಿ ಇನ್ನೂ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಮ್ ಇಂಡಿಯಾಗಾಗಿ ಆಡುತ್ತಿದ್ದರೆ, ಧೋನಿ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಅಲ್ಲದೆ, ಧೋನಿ ಮತ್ತು ಕೊಹ್ಲಿ ಇಬ್ಬರೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುತ್ತಿದ್ದರು.
ಧೋನಿ ಐಪಿಎಲ್ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದರೆ, ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಿಎಸ್‌ಕೆ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕೊಹ್ಲಿ ಮತ್ತು ಧೋನಿ ಇಬ್ಬರೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಇಬ್ಬರೂ ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಇವರಿಬ್ಬರ ಆದಾಯ ಎಷ್ಟು ಗೊತ್ತಾ?
ವಿರಾಟ್ ಕೊಹ್ಲಿಯ ನಿವ್ವಳ ಮೌಲ್ಯವು ಧೋನಿಗಿಂತ ಹೆಚ್ಚಾಗಿದೆ ಎಂದು ವರದಿಯೊಂದು ಹೇಳಿತ್ತು. ಮೇ 29 ರಂದು ಪ್ರಕಟವಾದ ವರದಿಯ ಪ್ರಕಾರ, ಧೋನಿಯ ನಿವ್ವಳ ಮೌಲ್ಯವು 1040 ಕೋಟಿ ರೂಪಾಯಿಗಳಾಗಿದ್ದರೆ, ಕೊಹ್ಲಿಯ ನಿವ್ವಳ ಮೌಲ್ಯವು 1050 ಕೋಟಿ ರೂ.ಗಳಿಗಿಂತ ಹೆಚ್ಚು ಎನ್ನಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ 252 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಜನಪ್ರಿಯ ಭಾರತೀಯ ಸೆಲೆಬ್ರಿಟಿಯಾಗಿದ್ದಾರೆ. ವರದಿ ಪ್ರಕಾರ, ಕೊಹ್ಲಿ ನಿವ್ವಳ ಮೌಲ್ಯ 1,050 ಕೋಟಿ ರೂಪಾಯಿ. 34 ವರ್ಷದ ಕೊಹ್ಲಿ ತಮ್ಮ ಎ+ ಟೀಂ ಇಂಡಿಯಾ ಒಪ್ಪಂದದಿಂದ 7 ಕೋಟಿ ರೂ. ಪಂದ್ಯ ಶುಲ್ಕವಾಗಿ ಪಡೆಯುತ್ತಾರೆ. ಪ್ರತಿ ಟೆಸ್ಟ್‌ನಿಂದ 15 ಲಕ್ಷ ರೂ. ಪಡೆದ್ರೆ, ಏಕದಿನ ಪಂದ್ಯದಿಂದ ಅವರ ಪ್ರತಿ ಪಂದ್ಯದ ಶುಲ್ಕ 6 ಲಕ್ಷ ರೂಪಾಯಿ ಮತ್ತು ಟಿ-20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಪಡೆಯುತ್ತಾರೆ. ಐಪಿಎಲ್ ನಲ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸುವುದಕ್ಕಾಗಿ ಕೊಹ್ಲಿ ವಾರ್ಷಿಕ 15 ಕೋಟಿ ರೂ. ಪಡೆಯುತ್ತಾರೆ.
ಇನ್ನು, ಧೋನಿ ತಮ್ಮ ಫ್ರಾಂಚೈಸಿ ಸಿಎಸ್‌ಕೆಯಿಂದ 12 ಕೋಟಿ ರೂಪಾಯಿಗಳನ್ನು ವಾರ್ಷಿಕ ಶುಲ್ಕವಾಗಿ ಪಡೆಯುತ್ತಾರೆ. ಅಲ್ಲದೆ, ಧೋನಿ ಕಂಪನಿಗಳಲ್ಲಿ ಹೂಡಿಕೆಯನ್ನು ಹೊಂದಿದ್ದು, ಇತರ ವ್ಯಾಪಾರ ಆಸಕ್ತಿಗಳನ್ನು ಸಹ ಹೊಂದಿದ್ದಾರೆ. ಹೀಗಾಗಿ ಅವರ ನಿವ್ವಳ ಮೌಲ್ಯವನ್ನು 1000 ಕೋಟಿ ದಾಟಿದೆ. ಆದರೆ, ಭಾರತದ ಲೆಜೆಂಡರಿ ಓಪನರ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 1,250 ಕೋಟಿ ರೂ.ಗಳ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ.