ಎಂಆರ್‌ಪಿಗಿಂತಲೂ ಅಧಿಕ ದರ ವಿತರಿಸಿದ್ದ ಫುಡ್ ಅಪ್ಲಿಕೇಶನ್ ಸ್ವಿಗ್ಗಿಗೆ ಚಂಡೀಗಢದ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ದಂಡ ವಿಧಿಸಿದೆ. ಗ್ರಾಹಕನಿಗೆ 11,500 ರೂಪಾಯಿಗಳನ್ನು ಪರಿಹಾರವಾಗಿ ಕೊಡುವಂತೆ ಸ್ವಿಗ್ಗಿಗೆ ಸೂಚಿಸಿದೆ. 2021ರಲ್ಲಿ ನಡೆದ ಪ್ರಕರಣ ಇದು. ನವೆಂಬರ್ 25ರಂದು ಮೋಹಿತ್ ಶರ್ಮಾ ಎಂಬಾತ ಸ್ವಿಗ್ಗಿಯಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದ. ಅವುಗಳಲ್ಲಿ ತಲಾ 250 ಗ್ರಾಂ ತೂಕದ ಡೇಟ್ ಕ್ರೌನ್‌ನ ಎರಡು ಬಾಕ್ಸ್‌ಗಳಿದ್ದವು.
ಆ್ಯಪ್‌ನಲ್ಲಿ ನಮೂದಿಸಿರುವ ಬೆಲೆಯ ಪ್ರಕಾರ, ಡೇಟ್ ಕ್ರೌನ್‌ನ ಒಂದು ಬಾಕ್ಸ್ ಬೆಲೆ 174 ರೂಪಾಯಿ. ಆದರೆ ರಿಯಾಯಿತಿ ದರದಲ್ಲಿ 158 ರೂಪಾಯಿಗೆ ಕೊಡುತ್ತಿರುವುದಾಗಿ ಸ್ವಿಗ್ಗಿಯಲ್ಲಿ ನಮೂದಿಸಲಾಗಿತ್ತು. ಉತ್ಪನ್ನ ಕೈ ಸೇರಿದ ಬಳಿಕ ಮೋಹಿತ್ ಅದನ್ನು ಚೆಕ್ ಮಾಡಿದ್ದಾರೆ. ಆದರೆ ಆ ಡೇಟ್ ಕ್ರೌನ್ ಬಾಕ್ಸ್‌ನ ಅಸಲಿ ಎಂಆರ್‌ಪಿ 117 ರೂಪಾಯಿ ಇತ್ತು. ಸ್ವಿಗ್ಗಿ 174 ರೂಪಾಯಿ ಎಂದು ತಪ್ಪಾಗಿ ನಮೂದಿಸಿ ಗ್ರಾಹಕನಿಂದ ಎಂಆರ್‌ಪಿಗಿಂತಲೂ ಹೆಚ್ಚಿನ ಬೆಲೆಯನ್ನು ವಸೂಲಿ ಮಾಡಿದೆ.
ಮೋಹಿತ್ ಸ್ವಿಗ್ಗಿ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದರು. ಘಟನೆ ಬಗ್ಗೆ ವಿವರಿಸಿದಾಗ ಸ್ವಿಗ್ಗಿ, ಎರಡು ಬಾಕ್ಸ್‌ಗಳಿಂದ 44 ರೂಪಾಯಿ ವ್ಯತ್ಯಾಸದ ಮೊತ್ತವನ್ನು ಮರುಪಾವತಿ ಮಾಡಿದೆ. ಆದರೆ ಇದನ್ನು ಗಮನಿಸಿದ ಎಷ್ಟೋ ಗ್ರಾಹಕರಿಗೆ ಇದೇ ರೀತಿ ಅನ್ಯಾಯವಾಗಿದೆ. ಸ್ವಿಗ್ಗಿಗೆಅನ್ಯಾಯದ ವ್ಯಾಪಾರ ಅಭ್ಯಾಸವಾಗಿದೆ ಎಂದು ಶರ್ಮಾ ಆರೋಪಿಸಿದರು ಮತ್ತು ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದರು. ದೂರುದಾರರಿಗೆ ಮಾನಸಿಕ ಯಾತನೆ ಮತ್ತು ಕಿರುಕುಳ ನೀಡಿದ್ದಕ್ಕಾಗಿ ಪರಿಹಾರವಾಗಿ 10,000 ರೂಪಾಯಿಗಳನ್ನು ಮತ್ತು ವ್ಯಾಜ್ಯದ ವೆಚ್ಚವಾಗಿ 1,500 ರೂಪಾಯಿಗಳನ್ನು ನೀಡುವಂತೆ ಸ್ವಿಗ್ಗಿಗೆ ಆಯೋಗವು ಆದೇಶಿಸಿದೆ.