ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ಮಲೆನಾಡ ಹಸಿರ ಸಿರಿಯಲ್ಲಿರುವ ಇಲ್ಲಿನ ಪ್ರವಾಸಿ ಸ್ಥಳಗಳನ್ನು ನೋಡುವುದೇ ಮನಸಿಗೆ ಮುದ ನೀಡುತ್ತದೆ.
ಕವಲೇದುರ್ಗ, ಆಗುಂಬೆ, ಸಿಬ್ಬಲು ಗುಡ್ಡೆ, ಕವಿಶೈಲ, ವಾರಾಹಿ ಪ್ರಾಜೆಕ್ಟ್, ತೀರ್ಥಹಳ್ಳಿ ಮೊದಲಾದವು ಪ್ರವಾಸಿಗರನ್ನು ಸೆಳೆಯುತ್ತವೆ.
ಇವುಗಳಲ್ಲಿ ಮೃಗವಧೆ ಕೂಡ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ರಾಮಾಯಣದಲ್ಲಿ ವನವಾಸದ ಸಂದರ್ಭದಲ್ಲಿ ಮಾರೀಚ ಮಾಯಾಮೃಗ(ಜಿಂಕೆ)ವಾಗಿ ಕಾಣಿಸಿಕೊಂಡಿದ್ದು, ಶ್ರೀರಾಮ ಅದನ್ನು ಬಾಣ ಬಿಟ್ಟು ವಧೆ ಮಾಡಿದ ಸ್ಥಳವೇ ಮೃಗವಧೆಯಾಗಿದೆ.
ಈ ಸ್ಥಳದಲ್ಲಿ ಶ್ರೀರಾಮ ಲಿಂಗ ಪ್ರತಿಷ್ಠಾಪಿಸಿದ್ದನೆಂದು ಹೇಳಲಾಗಿದೆ. ಇಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ.
ಶನೇಶ್ವರ, ಶಂಕರೇಶ್ವರ ದೇವಾಲಯಗಳಿಗೂ ಹೆಚ್ಚು ಭಕ್ತರು ಭೇಟಿ ಕೊಡುತ್ತಾರೆ. ಹಸಿರ ಸಿರಿಯ ನಡುವೆ ಸದಾ ಹರಿಯುವ ನದಿಯ ತೀರದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಸೊಬಗನ್ನು ಒಮ್ಮೆ ಕಣ್ತುಂಬಿಕೊಳ್ಳಿ.
ಮೃಗವಧೆಗೆ ಭೇಟಿ ನೀಡುವ ಜೊತೆಗೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಹಲವು ಪ್ರವಾಸಿ ತಾಣಗಳನ್ನೂ ನೋಡಿ ಬನ್ನಿ.