ಬೆಂಗಳೂರು : ಮಹಿಳೆಯ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಚುನಾವಣೆ ಹೊತ್ತಲ್ಲಿ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರಂ ಸಿಕ್ಕಂತಾಗಿದೆ. ಮಿ. ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ ಎಂದು ಏಕವಚನದಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಮಿಸ್ಟರ್ ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ, ಹೆದರಿ ಪಕ್ಕದ ಕ್ಷೇತ್ರಕ್ಕೆ ಹೋಗಿದ್ರಿ ಎಂದು ಡಿಕೆಶಿ ವಾಗ್ಧಾಳಿ ನಡೆಸಿದ್ದಾರೆ. ಚರ್ಚೆ ಮಾಡಲು ಸದನಕ್ಕೆ ಬಾ. ನೀನು ಎಂತ ಸುಳ್ಳುಗಾರ ಎಂಬುದು ಗೊತ್ತಾಗಲಿದೆ’ ನಾನು ಕಲ್ಲು ಲೂಟಿ ಮಾಡಿದೆನೋ, ಮೋಸ ಮಾಡಿದೆನೋ ಎಂಬ ಬಗ್ಗೆ ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಬರಲಿ ಎಂದು ಡಿಕೆಶಿ ಸವಾಲ್ ಹಾಕಿದ್ದಾರೆ.
ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಹೋರಾಟ ಮಾಡಲೇಬೇಕು. ನಾನು ಈಗಲೇ ಕರೆ ಕೊಡುತ್ತೇನೆ. ಪ್ರತಿಯೊಂದು ಮಹಿಳಾ ಸಂಘಟನೆಗಳು, ರಾಜ್ಯಾದ್ಯಂತ ಮಹಿಳೆಯರು ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಹೋರಾಟ ಮಾಡಬೇಕು, ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಅವರ ವಿಷಾದ, ಸಾರಿ ಇದ್ಯಾವುದೂ ನಮಗೆ ಬೇಕಿಲ್ಲ. ಕಪಾಳಕ್ಕೆ ಹೊಡೆದು ಬಳಿಕ ಸಾರಿ ಕೇಳಿದರೆ ಏನು ಪ್ರಯೋಜನ? ಹಾಗಾಗಿ ಜನರೇ ತಕ್ಕ ಪಾಠ ಕಲಿಸಬೇಕು. ರಾಜ್ಯದ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿಯೂ ಮಹಿಳೆಯರು ಪ್ರತಿಭಟನೆ ನಡೆಸಬೇಕು. ಒಂದು ಪಕ್ಷದ ಅಧ್ಯಕ್ಷನಾಗಿ ನಾನು ಕರೆ ಕೊಡುತ್ತಿದ್ದೇನೆ. ನಿಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಪ್ರತಿಭಟನೆ ಮಾಡಿ. ಪ್ರತಿ ತಾಲೂಕು ಮಟ್ಟದಲ್ಲಿಯೂ ಹೋರಾಟ ಮಾಡಬೇಕು ಎಂದು ಮಹಿಳಾ ಸಂಘಟನೆಗಳಿಗೆ ಕರೆ ನೀಡಿದ್ದಾರೆ.