ಸಿಎ ಅಂತಿಮ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ಇದರಲ್ಲಿ ಮಧ್ಯ ಪ್ರದೇಶದ ಮೊರೆನಾದ 19 ವರ್ಷದ ನಂದಿನಿ ಅಗರ್ವಾಲ್ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಅಂದರೆ ಈಕೆಯ ಸಹೋದರ ಸಚಿನ್ ಕೂಡ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಮಾತ್ರವಲ್ಲದೇ ಅಖಿಲ ಭಾರತದಲ್ಲಿ 18ನೇ ಅಂಕ ಪಡೆದಿದ್ದಾರೆ.
ನಂದಿನಿ 800 ಅಂಕಕ್ಕೆ 614 ಅಂಕ ಪಡೆಯುವಲ್ಲಿ ಯಶಸ್ವಿಯಾದರೆ ಈಕೆಯ ಸಹೋದರ 568 ಅಂಕಗಳನ್ನು ಗಳಿಸಿದ್ದಾರೆ. ಇಬ್ಬರ ಬಗ್ಗೆಯೂ ಹೆಮ್ಮೆಯಿದೆ..! ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಈ ಅಣ್ಣ-ತಂಗಿ ಜೋಡಿ ಟಾಪ್ ಸ್ಥಾನ ಪಡೆದಿದ್ದು ಇದೇ ಮೊದಲೇನಲ್ಲ. ವಿಕ್ಟರ್ ಕಾನ್ವೆಂಟ್ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಇವರಿಬ್ಬರು 2017ರಲ್ಲಿ ಜಂಟಿಯಾಗಿ ಮೊರೆನಾ ಜಿಲ್ಲೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ 94.5 ಪ್ರತಿಶತ ಅಂಕ ಗಳಿಸಿದ್ದರು.
ಅರೆ..! 2 ವರ್ಷ ಅಂತರವಿದ್ದರೂ ಕೂಡ ಒಟ್ಟಿಗೆ ದ್ವಿತೀಯ ಪಿಯುಸಿ ಅಂಕ ಗಳಿಸಲು ಹೇಗೆ ಸಾಧ್ಯ..? ಎಂದು ಎನಿಸಬಹುದು. ಸಚಿನ್ 2ನೇ ತರಗತಿಯಲ್ಲಿದ್ದ ವೇಳೆ ನಂದಿನಿ ಕೂಡ ನೇರವಾಗಿ 2ನೇ ತರಗತಿಗೆ ದಾಖಲಾಗಿದ್ದರು. ಇದಾದ ಬಳಿಕ ಇಬ್ಬರೂ ಸಹಪಾಠಿಗಳಾಗಿಯೇ ಇದ್ದಾರೆ.
ತಮ್ಮ ಯಶಸ್ಸಿನ ವಿಚಾರವಾಗಿ ಮಾತನಾಡಿದ ನಂದಿನಿ, ನನ್ನ ಈ ಯಶಸ್ಸಿನ ಹಿಂದೆ ನನ್ನ ಸಹೋದರ ಸಚಿನ್ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
ಪೂರ್ವ ತಯಾರಿ ಪರೀಕ್ಷೆಗಳಲ್ಲಿ ನಾನು ಕಡಿಮೆ ಅಂಕಗಳನ್ನು ಸಂಪಾದಿಸುತ್ತಿದ್ದೆ. ಇದರಿಂದ ನಾನು ಬೇಸರಗೊಂಡಿದ್ದೆ. ಆದರೆ ನನ್ನ ಸಹೋದರ ಮ್ಯಾಜಿಕ್ನಂತೆಯೇ ನನಗೆ ಸಹಾಯ ಮಾಡಿದ್ದನು. ಆತ ನನಗೆ ಓದಲು ತುಂಬಾನೇ ಸಹಾಯ ಮಾಡಿದ್ದನು ಎಂದು ನಂದಿನಿ ಹೇಳಿದ್ದಾರೆ.
ಸಚಿನ್ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು, ನಂದಿನಿ ಕೂಡ ನನಗೆ ಅನೇಕ ವಿಚಾರಗಳಲ್ಲಿ ಸ್ಫೂರ್ತಿಯಾಗಿದ್ದಾಳೆ. ಆಕೆಯನ್ನ ನೋಡಿಯೇ ನಾನು ಓದಿನ ಕಡೆಗೆ ಹೆಚ್ಚು ಗಮನವನ್ನು ನೀಡುತ್ತಿದ್ದೆ. ನನ್ನ ಈ ಸಾಧನೆಯ ಶ್ರೇಯಸ್ಸನ್ನು ನಾನು ನನ್ನ ತಂಗಿ ನಂದಿನಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ರು.