ಮಧ್ಯ ಪ್ರದೇಶದಲ್ಲಿ ಭಾರೀ ನಟೋರಿಯಸ್ ಆಗಿರುವ ’ಚಡ್ಡಿ – ಬನಿಯಾನ್’ ಗ್ಯಾಂಗ್ ಇಲ್ಲಿನ ಖರ್ಗಾಂವ್ನಲ್ಲಿರುವ ಹತ್ತಿ ಘಟಕವೊಂದಕ್ಕೆ ನುಗ್ಗಿ 10 ಲಕ್ಷ ರೂ.ಗಳನ್ನು ದೋಚಿದ್ದಾರೆ.
ಬೆಳಗ್ಗಿನ ಜಾವ 1:40ರ ವೇಳೆ ಕಾರ್ಖಾನೆ ಚಟಿವಕಟಿಯಲ್ಲಿದ್ದು, ಕಾರ್ಮಿಕರು ಕರ್ತವ್ಯದಲ್ಲಿರುವಾಗಲೇ ಈ ದುಷ್ಕೃತ್ಯ ಜರುಗಿದೆ. ಘಟನೆಯು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಇಲ್ಲಿನ ಬಿಸ್ತಾನ್ ರಸ್ತೆಯಲ್ಲಿರುವ ಹತ್ತಿ ಜಿನ್ನಿಂಗ್ ಘಟಕವೊಂದಕ್ಕೆ ’ಚೆಡ್ಡಿ – ಬನಿಯಾನ್’ ಗ್ಯಾಂಗ್ನ 10 ಡಕಾಯಿತರು ನುಗ್ಗಿದ್ದಾರೆ. ಎರಡು ದಿನಗಳ ಹಿಂದೆ ಭಾರೀ ಮಳೆಯಿಂದಾಗಿ ಕಾರ್ಖಾನೆಯ ಹೊರ ಗೋಡೆಗೆ ಹಾನಿಯಾಗಿತ್ತು. ಇದರ ಲಾಭ ಪಡೆದು ನುಗ್ಗಿದ ಗ್ಯಾಂಗಿನ ಎಂಟು ಮಂದಿ ಬರೀ ಚಡ್ಡಿಯಲ್ಲೇ ಇದ್ದರೆಂದು ತಿಳಿದು ಬಂದಿದೆ.
ಭಾರೀ ಯಂತ್ರಗಳು ಕಾರ್ಯನಿರತವಾಗಿದ್ದ ಕಾರಣ ಘಟಕದಲ್ಲೆಲ್ಲಾ ವಿಪರೀತ ಸದ್ದು ಆವರಿಸಿದ್ದು ಯಾರೊಬ್ಬರಿಗೂ ಈ ಗ್ಯಾಂಗ್ ನುಸುಳಿದ ಸದ್ದು ಕೇಳಿಸಲಿಲ್ಲ. ಈ ವೇಳೆ ಕ್ಯಾಬಿನ್ ಒಂದರ ಒಳಗೆ ನುಗ್ಗಿದ ಗ್ಯಾಂಗ್ 10 ಲಕ್ಷ ರೂ.ಗಳನ್ನು ದೋಚಿದೆ.
ಕಾರ್ಖಾನೆಯ ಮಾಲೀಕ ಸಚಿನ್ ಮಹಾಜನ್ ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕ್ಯಾಂಪಸ್ನ ವಿವಿಧೆಡೆಗಳಲ್ಲಿ ಇಟ್ಟಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಘಟನೆ ಸೆರೆಯಾಗಿದೆ.
ಕೆಲ ದಿನಗಳ ಹಿಂದೆ ಇದೇ ತಂಡ ಇದೇ ಪ್ರದೇಶದಲ್ಲಿರುವ ಮಾರು ಮಂದಿರದ ಬಳಿ ಇರುವ ರಾಕೇಶ್ ಜೋಶಿ ಮಹರಾಜ್ ಎಂಬ ವ್ಯಕ್ತಿಯ ಮನೆಗೆ ನುಗ್ಗಿ ಐದು ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿತ್ತು.
ಘಟನೆ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ಎಲ್ಲಾ ಆಪಾದಿತರೂ ಶೀಘ್ರವೇ ಕಂಬಿ ಎಣಿಸಲಿದ್ದಾರೆ ಎಂದು ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ರಾಕೇಶ್ ಮೋಹನ್ ಶುಕ್ಲಾ ತಿಳಿಸಿದ್ದಾರೆ.