ಬೆಂಗಳೂರು: ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ(ಎಂಪಿಎಂ)ಯನ್ನು ಸರ್ಕಾರಿ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಚಿಂತನೆ ನಡೆಸಿದೆ.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯೆ ಬಲ್ಕಿಶ್ ಬಾನು ಅವರ ಪ್ರಶ್ನೆಗೆ ಉತ್ತರ ನೀಡಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಎಂಪಿಎಂಗೆ ಕಚ್ಚಾ ಸಾಮಗ್ರಿ ಪೂರೈಕೆಗೆ ಅಗತ್ಯವಾದ ಮರ ಬೆಳೆಸಲು 1980ರಲ್ಲಿ ಮೂವತ್ತು ಸಾವಿರ ಹೆಕ್ಟೇರ್ ನೀಡಲಾಗಿದೆ. 2015 ರಿಂದ ಕಾರ್ಖಾನೆ ಬಾಗಿಲು ಮುಚ್ಚಿದೆ. ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೊಂದಿರುವ ನೆಡುತೋಪುಗಳ ಗುತ್ತಿಗೆ ಅವಧಿ 2060 ರ ವರೆಗೆ ವಿಸ್ತರಿಸಲಾಗಿದೆ. ನೀಲಗಿರಿ ನೆಡಲು ಅನುಮತಿ ಇಲ್ಲವಾದರೂ ತೆರವುಗೊಳಿಸಲು ಕೋರ್ಟ್ ತಡೆಯಾಜ್ಞೆ ಇದೆ. ಹೀಗಾಗಿ ನೀಲಗಿರಿ ನಿರ್ಮೂಲನೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಎಂಪಿಎಂ ಪುನಾರಂಭಿಸಲು ಪ್ರಯತ್ನ ನಡೆದಿದೆ. ಅರ್ಹ ಕಂಪನಿಗಳು ಮುಂದೆ ಬಾರದ ಕಾರಣ ಖಾಸಗಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಎಂಪಿಎಂ ನಡೆತೋಪುಗಳಲ್ಲಿ ನೀಲಗಿರಿ ಬೆಳೆಯಲು ಹಾಗೂ ಹೊಣೆಗಾರಿಕೆ ಇಲ್ಲದ ಕಾರ್ಯ ಚಟುವಟಿಕೆಗಳ ಷರತ್ತುಗಳನ್ನು ಕೆಲ ಕಂಪನಿಗಳು ವಿಧಿಸಿದ್ದ ಕಾರಣ ಸರ್ಕಾರ ಒಪ್ಪಿರಲಿಲ್ಲ ಎಂದು ಹೇಳಿದ್ದಾರೆ.