ಭೋಪಾಲ್: ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬ ಮದ್ಯ ಖರೀದಿಗೆ ಹಣ ನೀಡಲು ನಿರಾಕರಿಸಿದ ಕಾರಣ ತನ್ನ 35 ವರ್ಷದ ಲಿವ್-ಇನ್ ಸಂಗಾತಿ ಮೂಗನ್ನು ಕತ್ತರಿಸಿದ ಘಟನೆ ವರದಿಯಾಗಿದೆ. ಆರೋಪಿ ಲವ್ ಕುಶ್ ಪಟೇಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪಟೇಲ್ ಕಳೆದ ಎರಡು ವರ್ಷಗಳಿಂದ ಸೋನು ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾನೆ. ಪೊಲೀಸ್ ಅಧಿಕಾರಿಯ ಪ್ರಕಾರ, ಶನಿವಾರ ಬೆಳಗ್ಗೆ ಮದ್ಯ ಖರೀದಿಸಲು 400 ರೂಪಾಯಿ ನೀಡುವಂತೆ ಕೇಳಿದ್ದಾನೆ. ಆದರೆ ಆಕೆ ಹಣ ನೀಡಲು ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಆತ ಅಲ್ಲೇ ಬಿದ್ದಿದ್ದ ಕೊಡಲಿಯನ್ನು ಎತ್ತಿಕೊಂಡು ಸೋನುವಿನ ಮೂಗನ್ನು ಕತ್ತರಿಸಿದ್ದಾನೆ. ಆಕೆಯ ಕೂಗು ಕೇಳಿದ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಷ್ಟರಲ್ಲಿ ಪಟೇಲ್ ಓಡಿಹೋಗಿದ್ದ. ಸೋನುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಕೆಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪಟೇಲ್‌ಗಾಗಿ ಹುಡುಕಾಟ ನಡೆಸಿ ಬಂಧಿಸಲಾಗಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.