ಚಂದೇರಿ: ಹರಾಜಿನ ಮೂಲಕ ಗ್ರಾಮದ ಮುಖ್ಯಸ್ಥರನ್ನು ನೇಮಿಸಿದ ವಿಲಕ್ಷಣ ಘಟನೆ ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯ ಭಟೌಲಿ ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ.
ಮಂಗಳವಾರ ಗ್ರಾಮ ಸಮಿತಿಯು ನಡೆಸಿದ ಹರಾಜಿನಲ್ಲಿ ವ್ಯಕ್ತಿಯೊಬ್ಬರು 44 ಲಕ್ಷ ರೂ. ಬಿಡ್ ಮಾಡಿದ ನಂತರ ಸರಪಂಚ ಅಥವಾ ಗ್ರಾಮದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ 14 ರಂದು, ಭಟೌಲಿ ಗ್ರಾಮ ಪಂಚಾಯಿತಿಯ ನಿವಾಸಿಗಳು ರಾಧಾ-ಕೃಷ್ಣ ದೇವಸ್ಥಾನದಲ್ಲಿ ಸಭೆ ನಡೆಸಿ ಗ್ರಾಮದ ನೂತನ ಮುಖ್ಯಸ್ಥರನ್ನು ಆಯ್ಕೆ ಮಾಡಲು ಹರಾಜು ನಡೆಸಲಾಯಿತು.
ಹರಾಜಿನ ವೇಳೆ ಸೌರಭ್ ಸಿಂಗ್ ಯಾದವ್ ಅವರು 44 ಲಕ್ಷ ರೂ.ಗಳ ಬಿಡ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಅವರನ್ನು ಗ್ರಾಮದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಬಿಡ್ಡಿಂಗ್ ರೂ. 21 ಲಕ್ಷದಿಂದ ಪ್ರಾರಂಭವಾಗಿದೆ. ಅಗ್ರ ಬಿಡ್ ಆಗಿ ರೂ. 44 ಲಕ್ಷಕ್ಕೆ ಕೊನೆಗೊಂಡಿದೆ. ವಿಜೇತ ಅಭ್ಯರ್ಥಿಯು ಮೊತ್ತವನ್ನು ಠೇವಣಿ ಮಾಡಲು ವಿಫಲವಾದರೆ, ಎರಡನೇ ಅತಿ ಹೆಚ್ಚು ಬಿಡ್ ಮಾಡಿದವರನ್ನು ಪೋಸ್ಟ್‌ಗೆ ಸ್ವಯಂಚಾಲಿತ ಹಕ್ಕುದಾರರನ್ನಾಗಿ ಮಾಡಲಾಗುತ್ತದೆ ಎಂಬ ನಿಯಮವನ್ನು ಮಾಡಲಾಗಿದೆ.
ಭಟೌಲಿ ಗ್ರಾಮ ಪಂಚಾಯತಿಯು ಚಂದೇರಿ ಜಿಲ್ಲೆಗೆ ಒಳಪಡುತ್ತದೆ. ಫೆಬ್ರವರಿ 16 ರಂದು ಮೂರನೇ ಮತ್ತು ಅಂತಿಮ ಹಂತದ ಪಂಚಾಯತಿ ಚುನಾವಣೆಯಲ್ಲಿ ಮತದಾನ ನಡೆಯಲಿದೆ. ಹರಾಜಿನ ಮೂಲಕ ಸಂಗ್ರಹಿಸಿದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಮತ್ತು ಪುನಃಸ್ಥಾಪನೆ ಮತ್ತು ವಿಸ್ತರಣೆಗೆ ಬಳಸಲಾಗುವುದು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇನ್ನು ನಿಗದಿತ ಚುನಾವಣಾ ವಿಧಾನವನ್ನು ಅನುಸರಿಸಿ ಮಾತ್ರ ಗ್ರಾಮ ಮುಖ್ಯಸ್ಥರನ್ನು ನೇಮಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಗೆಲ್ಲುವ ಬಿಡ್ ದಾರರು ಚುನಾವಣೆಗೆ ಮುನ್ನ ನಾಮಪತ್ರ ಸಲ್ಲಿಸಲು ಯಾವುದೇ ಅಡ್ಡಿ ಇಲ್ಲ.