ಕಲಬುರ್ಗಿ: ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರಿಗೆ ರೆಮ್ ಡೆಸಿವಿರ್ ಚುಚ್ಚುಮದ್ದು ಕೊರತೆ ಕಂಡುಬಂದಿದೆ. ರೆಮ್ ಡೆಸಿವಿರ್ ಅಗತ್ಯವಾಗಿ ಬೇಕಾಗಿರುವುದನ್ನು ಮನಗಂಡ ವೈದ್ಯರಾದ ಸಂಸದ ಡಾ. ಉಮೇಶ್ ಜಾಧವ್ ತಾವೇ ಖುದ್ದಾಗಿ ಬೆಂಗಳೂರಿನಿಂದ ವಿಮಾನದಲ್ಲಿ ಇಂಜೆಕ್ಷನ್ ತೆಗೆದುಕೊಂಡು ಬಂದಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ರೆಮ್ ಡೆಸಿವಿರ್ ಚುಚ್ಚುಮದ್ದು ದಾಸ್ತಾನು ಖಾಲಿಯಾಗಿರುವ ಬಗ್ಗೆ ಸಹಾಯಕ ಔಷಧ ನಿಯಂತ್ರಕರು ಗೋಪಾಲ ಭಂಡಾರಿ ಅವರು ಸಂಸದರ ಗಮನಕ್ಕೆ ತಂದಿದ್ದಾರೆ. ಕಲಬುರಗಿಗೆ ಮಂಜೂರಾಗಿದ್ದ ಇಂಜೆಕ್ಷನ್ ಬೆಂಗಳೂರಿನಿಂದ ಬರಲು ಎರಡು ದಿನ ಆಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೆಮ್ ಡೆಸಿವಿರ್ ಕೊರತೆ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ಉಮೇಶ್ ಜಾಧವ್ ತಾವೇ ಬೆಂಗಳೂರಿನ ಕೋವಿಡ್ ವಾರ್ ರೂಮ್ ಗೆ ತೆರಳಿದ್ದಾರೆ.
ಅಲ್ಲಿನ ಅಧಿಕಾರಿಗಳಿಗೆ ಪರಿಸ್ಥಿತಿಯ ಗಂಭೀರತೆ ಮನವರಿಕೆ ಮಾಡಿಕೊಟ್ಟ ಸಂಸದರು 350 ಬಾಟಲ್ ರೆಮ್ ಡೆಸಿವಿರ್ ಪಡೆದುಕೊಂಡು ತಮ್ಮ ಕಾರಿನಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಿಸಿ ಅಲ್ಲಿಂದ ವಿಮಾನದಲ್ಲಿ ಕಲಬುರ್ಗಿಗೆ ತಂದಿದ್ದಾರೆ. ಕಲಬುರಗಿಯ ಔಷಧ ನಿಯಂತ್ರಕರಿಗೆ ತಾವು ತಂದಿದ್ದ ಔಷಧ ತಲುಪಿಸಿದ್ದು, ಈ ಮೂಲಕ ಸಂಸದ ಉಮೇಶ್ ಜಾಧವ್ ಮಾದರಿಯಾಗಿದ್ದಾರೆ.