ಮಧ್ಯಪ್ರದೇಶದ ಸರ್ಕಾರಿ ನೌಕರ, ಶಿಕ್ಷಕ ಸಮುದಾಯ ಪದ್ಧತಿಯನ್ನು ಗೌರವಿಸುವ ನೆಪದಲ್ಲಿ ತನ್ನ ಮನೆಯೊಳಗೆ ಹೆಂಡತಿಯ ಶವವನ್ನು ಹೂಳಿದ ಪ್ರಸಂಗ ನಡೆದಿದೆ.
ಆದರೆ ನೆರೆಹೊರೆಯವರು ಈ ಕ್ರಮಕ್ಕೆ ಆಕ್ಷೇಪಿಸಿ ವಿರೋಧಿಸಿದ ನಂತರ ಶವವನ್ನು ಹೊರತೆಗೆದು ಸ್ಮಶಾನಕ್ಕೆ ಸ್ಥಳಾಂತರಿಸಲಾಯಿತು.
ಶಿಕ್ಷಕ ಓಂಕಾರ್ ದಾಸ್ ಮೊಗ್ರೆ (50) ಅವರ ಪತ್ನಿ ರುಕ್ಮಣಿ (45) ಅನಾರೋಗ್ಯದಿಂದ ನಿಧನರಾದರು. ನಂತರ ಅವರ ಮೃತ ದೇಹವನ್ನು ಮನೆಯ ವರಾಂಡದಲ್ಲಿ ಹೂಳಿದರು. ಮನೆಯೊಳಗೆ ಹೂಳಲು ಅಲ್ಲಿನ ನಿವಾಸಿಗಳು ಮತ್ತು ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
ತಮ್ಮ ಹೆಂಡತಿಯನ್ನು ಬಹಳವಾಗಿ ಪ್ರೀತಿಸಿದ್ದರಿಂದ ಹಾಗೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ದಿಂಡೋರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬದ ಸದಸ್ಯರ ಶವಗಳನ್ನು ಮನೆ ಆವರಣದಲ್ಲಿ ಸಮಾಧಿ ಮಾಡುವ ಪಣಿಕಾ ಸಮುದಾಯದ ಸಂಪ್ರದಾಯದ ಬಗ್ಗೆ ಅವರು ಸ್ಥಳೀಯ ಜನರಿಗೆ ತಿಳಿಸಿದರು.
ನೆರೆಹೊರೆಯವರು ಮಾತ್ರ ಆಕ್ಷೇಪ ಮುಂದುವರಿಸಿದಾಗ ಕೋಟ್ವಾಲಿ ಪೊಲೀಸ್ ಠಾಣೆ ಪೊಲೀಸರ ಮಧ್ಯ ಪ್ರವೇಶವಾಯಿತು. ಸ್ಥಳೀಯ ಅಧಿಕಾರಿಗಳು ಶವವನ್ನು ಹೊರತೆಗೆದು ಮರುದಿನ ಸ್ಮಶಾನಕ್ಕೆ ಸ್ಥಳಾಂತರಿಸಿದರು.