
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಸಂಸದೆ ಸುಮಲತಾ ಅಂಬರೀಶ್ ಫೆಬ್ರವರಿ 25ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಹತ್ವದ ಸಭೆ ಕರೆದಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮುಖಂಡರು, ಬೆಂಬಲಿಗರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸುಮಲತಾ ಅಂಬರೀಶ್ ಅವರು ಇನ್ನೂ ಅಧಿಕೃತವಾಗಿ ಬಿಜೆಪಿಗೆ ಸೇರಿಲ್ಲ. ಮಂಡ್ಯ ಕ್ಷೇತ್ರದಿಂದ ಟಿಕೆಟ್ ಖಚಿತಪಡಿಸಿಕೊಂಡು ಅವರು ಬಿಜೆಪಿ ಸೇರುವ ಬಗ್ಗೆ ಇಲ್ಲವೇ ಟಿಕೆಟ್ ಕೈತಪ್ಪಿದಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ಇಂದಿನ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅವರು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಬಿಜೆಪಿ –ಜೆಡಿಎಸ್ ಮೈತ್ರಿಯಿಂದಾಗಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ. ಈ ಬಗ್ಗೆಯೂ ಚರ್ಚೆ ನಡೆಸಿ ಸಂಸದೆ ಸುಮಲತಾ ಅಂಬರೀಶ್ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.