ದಾವಣಗೆರೆ: ಯಡಿಯೂರಪ್ಪ ಕಟ್ಟಿ ಬೆಳೆಸಿದ ಪಕ್ಷವನ್ನು ಈಗ ಕೆಲವರು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ನಮ್ಮ ಮುಖಂಡರು ಸೌಜನ್ಯಕ್ಕಾದರೂ ಕರೆ ಮಾಡಿ ಮಾತನಾಡುತ್ತಿಲ್ಲ. ನಮ್ಮನ್ನು ಬಿಜೆಪಿಯಿಂದ ಹೊರಗೆ ಕಳುಹಿಸಲು ನೋಡುತ್ತಿದ್ದಾರೆ. ಈ ಗಟ್ಟಿ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕಟ್ಟಿದ್ದ ಹುತ್ತದಲ್ಲಿ ಕೆಲವರು ಬಂದು ಸೇರಿಕೊಂಡಿದ್ದಾರೆ. ಈಗ ಬಿಜೆಪಿ ಕಚೇರಿಯಲ್ಲಿ ಕುಳಿತಿರುವವರು ಯಾರೂ ಪಕ್ಷ ಕಟ್ಟಿದವರಲ್ಲ. ಇದನ್ನೆಲ್ಲ ನೆನೆದು ಯಡಿಯೂರಪ್ಪ ನನ್ನ ಮುಂದೆ ಕಣ್ಣೀರು ಹಾಕಿದ್ದರು ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಕೂತಿರುವ ಕರ್ನಾಟಕದವರು ಕಂಟ್ರೋಲ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಆದವರು ಅವರ ಮಾತು ಕೇಳಬೇಕಿತ್ತು. ಅಷ್ಟು ನಿಯಂತ್ರಿಸುತ್ತಿದ್ದರು. ನಮ್ಮ ಜಿಲ್ಲೆಯ ನಾಯಕರು ಕೂಡ ನನ್ನನ್ನು ತುಳಿಯಲು ಪ್ರಯತ್ನಿಸಿದರು. ನಮ್ಮ ಕೈಯಿಂದ ಅಧಿಕಾರ ಹೋಗುತ್ತದೆ ಎಂದು ಸಚಿವ ಸ್ಥಾನ ಕೊಡಿಸಲಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ಧ ರೇಣುಕಾಚಾರ್ಯ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಅವಧಿ ಮುಗಿದು ಎರಡು ವರ್ಷಗಳಾಗಿದ್ದರೂ ಯಾವ ಪುರುಷಾರ್ಥಕ್ಕೆ ಅವರನ್ನೇ ಮುಂದುವರೆಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ. ಯಡಿಯೂರಪ್ಪನವರಿಗೆ ಸಂಸದೀಯ ಮಂಡಳಿ ಸ್ಥಾನ ನೀಡಿರುವುದು ನಾಮಕಾವಸ್ತೆಗೆ ಮಾತ್ರ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೂರುವವರು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.
ವಿಧಾನಸಭೆ ಚುನಾವಣೆಗೆ ಪ್ರಧಾನಿ ಮೋದಿ ಕರೆತಂದು ಪ್ರಚಾರ ಮಾಡಿಸಿದರು. ಮೋದಿ ಅವರನ್ನು ಕರೆತಂದು ರಾಜ್ಯದ ಮೂಲೆ ಮೂಲೆ ಸುತ್ತಿಸಿ ಮರ್ಯಾದೆ ತೆಗೆದರು. ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಕೆಲವರು ಪಕ್ಷವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ರಿಮೋಟ್ ಕಂಟ್ರೋಲ್ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿ. ಎಲ್. ಸಂತೋಷ್ ವಿರುದ್ಧ ರೇಣುಕಾಚಾರ್ಯ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ಯಡಿಯೂರಪ್ಪ ಕಟ್ಟಿ ಬೆಳೆಸಿದ ಪಕ್ಷವನ್ನು ಈಗ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ನಮ್ಮ ಮುಖಂಡರು ಸೌಜನ್ಯಕ್ಕಾದರೂ ಕರೆ ಮಾಡಿ ಮಾತನಾಡುತ್ತಿಲ್ಲ. ನಮ್ಮನ್ನು ಬಿಜೆಪಿಯಿಂದ ಹೊರಗೆ ಕಳುಹಿಸಲು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.