ಹೆಂಡತಿಗೆ ಜೀವನಾಂಶ ಕೊಡಬೇಕಾದ ವ್ಯಕ್ತಿ ಮಧ್ಯಪ್ರದೇಶದಲ್ಲಿ ಪೊಲೀಸರಿಗೆ ದೊಡ್ಡ ತಲೆನೋವು ತಂದಿದ್ದ. 2 ಚೀಲದ ತುಂಬಾ ನಾಣ್ಯ ತುಂಬಿಕೊಂಡು ಬಂದಿದ್ದ ಆತ ಅದನ್ನು ತನ್ನ ಪತ್ನಿಗೆ ಜೀವನಾಂಶವಾಗಿ ನೀಡಿ ಎಂದು ಪೊಲೀಸರಿಗೆ ನೀಡಿದ್ದ. ಆತ ತಂದಿದ್ದ 2 ಚೀಲ ನಾಣ್ಯಗಳನ್ನು ಎಣಿಸುವಲ್ಲಿ ಪೊಲೀಸರು ಸುಸ್ತಾಗಿಹೋದ್ರು.
ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ದಂಪತಿ ಮಧ್ಯೆ ಜಗಳವಾಗಿದೆ. ಇಬ್ಬರ ನಡುವಿನ ಸಂಬಂಧ ಹಳಸಿ ಜಗಳ ಗಂಭೀರವಾದಾಗ ದಂಪತಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದರು.
ಪರಿಸ್ಥಿತಿಯನ್ನು ಕೂಲಂಕುಷವಾಗಿ ಪರಿಗಣಿಸಿದ ನ್ಯಾಯಾಲಯ ಹೆಂಡತಿಗೆ ತಿಂಗಳಿಗೆ 5,000 ರೂ.ಗಳನ್ನು ಜೀವನಾಂಶವಾಗಿ ಪಾವತಿಸಬೇಕು ಆ ವ್ಯಕ್ತಿಗೆ ಸೂಚಿಸಿ ತೀರ್ಪು ನೀಡಿತು.
ನ್ಯಾಯಾಲಯದ ಆದೇಶದ ಹೊರತಾಗಿಯೂ ತೀರ್ಪು ಪಾಲಿಸದ ವ್ಯಕ್ತಿ ಸತತ ಎಂಟು ತಿಂಗಳವರೆಗೆ ಪತ್ನಿಗೆ ಜೀವನಾಂಶ ಪಾವತಿಸಲಿಲ್ಲ. ನ್ಯಾಯಾಲಯದ ತೀರ್ಪನ್ನು ಪತಿ ಕಡೆಗಣಿಸಿದ್ದರಿಂದ ಹತಾಶಳಾದ ಪತ್ನಿ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋದಳು. ಈ ವೇಳೆ ನ್ಯಾಯಾಲಯ ಮಧ್ಯಪ್ರವೇಶಿಸಿ ಮಹಿಳೆಗೆ ಜೀವನಾಂಶ ಕೊಡಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದು, ಆ ಮೂಲಕ ಪತ್ನಿಯ ಪರವಾಗಿ ಪತಿಯಿಂದ ಬಾಕಿ ಇರುವ ಮೊತ್ತವನ್ನು ವಸೂಲಿ ಮಾಡುವಂತೆ ಸೂಚಿಸಿತು.
ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರು ಜೀವನ ನಿರ್ವಹಣಾ ಶುಲ್ಕವನ್ನು ಪಾವತಿಸುವಂತೆ ವ್ಯಕ್ತಿಗೆ ಹೇಳಿದ್ದಾರೆ. ಆದರೂ ಹಣ ನೀಡಲು ಹಿಂಜರಿದ ಆತ ಒತ್ತಡ ಹೆಚ್ಚಾದಾಗ ಪತ್ನಿಗೆ ಜೀವನಾಂಶ ನೀಡಲು ಮುಂದಾದ. ಸ್ವೀಟ್ ಅಂಗಡಿ ನಡೆಸ್ತಿದ್ದ ಆತ ಎರಡು ಚೀಲಗಳಲ್ಲಿ ನಾಣ್ಯಗಳನ್ನು ತುಂಬಿಕೊಂಡು ಪೊಲೀಸ್ ಠಾಣೆಗೆ ತಂದು ಕೊಟ್ಟ.
ಅವನು ಕೊಟ್ಟ ನಾಣ್ಯಗಳನ್ನು ಎಣಿಸೋದೇ ಪೊಲೀಸರಿಗೆ ದೊಡ್ಡ ಕೆಲಸವಾಗಿತ್ತು. ಭಾರೀ ಸಮಯದ ಬಳಿಕವೂ ನಾಣ್ಯಗಳನ್ನು ಎಣಿಸಿದ ಪೊಲೀಸರು ನಾಣ್ಯಗಳ ಒಟ್ಟು ಮೊತ್ತ 20 ಸಾವಿರ ರೂಪಾಯಿಯನ್ನ ಆತನ ಪತ್ನಿಗೆ ನೀಡಿದರು. ಇದರ ಜೊತೆಗೆ 10 ರೂಪಾಯಿ ನೋಟುಗಳ ರೂಪದಲ್ಲಿ 10 ಸಾವಿರ ರೂಪಾಯಿಗಳನ್ನು ಆ ವ್ಯಕ್ತಿ ತಂದಿದ್ದು ಸಂಪೂರ್ಣ ಮೊತ್ತವನ್ನು ಲೆಕ್ಕ ಹಾಕಿದ ಬಳಿಕ ನ್ಯಾಯಾಲಯದ ಆದೇಶದಂತೆ ಬ್ಯಾಂಕ್‌ನಲ್ಲಿ ಭದ್ರವಾಗಿ ಠೇವಣಿ ಇಡಲಾಯ್ತು.