ಮಂಗಳೂರು: ದಕ್ಷಿಣ ಕನ್ನಡದ ಕಡಬ ಮೂಲದ ಯುವಕನೊಬ್ಬ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿದ್ದು, ಯುವಕನ ಬಿಡುಗಡೆಗೆ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದಾರೆ.
ನಕಲಿ ಬ್ಯಾಂಕ್ ಖಾತೆ ತೆರೆದು ಅಕ್ರಮ ಹಣ ವ್ಯವಹಾರ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಶೇಖರ್ ಎಂ.ಕೆ ಎಂಬ ಯುವಕ 2022ರ ನವೆಂಬರ್ ನಿಂದ ರಿಯಾದ್ ನಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ.
ಹ್ಯಾಕರ್ ಗಳು ನಕಲಿ ಖಾತೆ ಸೃಷ್ಟಿಸಿ ವಂಚಿಸಿದ್ದು, ನಿರಪರಾಧಿ ಯುವಕ ಜೈಲುಪಾಲಾಗಿದ್ದಾರೆ. ಚಂದ್ರಶೇಖರ್ ಎಂ.ಕೆ ಮೂಲತ: ಕಡಬದ ಐತೂರು ಗ್ರಾಮದವರಾಗಿದ್ದು, ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ವಿರುದ್ಧ ನಕಲಿ ಬ್ಯಾಂಕ್ ಖಾತೆ ತೆರೆದು ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸೌದಿ ಪೊಲೀಸರು ಬಂಧಿಸಿದ್ದಾರೆ.
ನಿರಪರಾಧಿ ಯುವಕನ ಬಿಡುಗಡೆ ಮಾಡುವಂತೆ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲ್, ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
2022ರಿಂದ ಸೌದಿ ಅರೇಬಿಯಾದ ಆಲ್ ಫಾನರ್ ಕಂಪನಿಯಲ್ಲಿ ಚಂದ್ರಶೇಖರ್ ಕೆಲಸ ಮಾಡುತ್ತಿದ್ದರು. ಈ ವೇಳೆ ಮೊಬೈಲ್ ಹಾಗೂ ಸಿಮ್ ಕಾರ್ಡ್ ಖರೀದಿಸುವ ವೇಳೆ ಅನಿರೀಕ್ಷಿತ ಘಟನೆಗಳ ಸರಣಿಗೆ ಒಳಗಾಗಿ ಬಂಧಿಸಲ್ಪಟ್ಟಿದ್ದಾರೆ. ಭಾಷೆ ತಿಳಿಯದೇ ಮೊಬೈಲ್ ಗೆ ಬಂದ ಮೆಸೇಜ್ ಕ್ಲಿಕ್ ಮಾಡಿದಾಗ ಬಂದ ಕರೆ ಸ್ವೀಕರಿಸಿದ್ದಾರೆ. ಬಳಿಕ ಒಟಿಪಿ ಕೇಳಿದಾಗ ಹಂಚಿಕೊಂಡಿದ್ದಾರೆ. ಈ ಬೆಳವಣಿಗೆ ಬಳಿಕ ಅವರು ಬ್ಯಾಂಕಿಂಗ್ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರ ವಿರುದ್ಧ ಆರೋಪಿಸಲಾಗಿದೆ. ಚಂದ್ರಶೇಖರ್ ಅವರ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್ ಗಳು ದುರ್ಬಳಕೆ ಮಾಡಿಕೊಂಡು ಬ್ಯಾಂಕ್ ಖಾತೆಗೆ ವಂಚಿಸಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ನಿರಪರಾಧಿ ಯುವಕನನ್ನು ಬಿಡುಗಡೆಗೊಳಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.