ಭೋಪಾಲ್: ಮಧ್ಯಪ್ರದೇಶದ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರ ಸೊಸೆ ಶಾಜಾಪುರದ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬುಧವಾರ ಬೆಳಗ್ಗೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮೃತ ಸವಿತಾ ಪರ್ಮಾರ್ ಅವರು ಮಂಗಳವಾರ ಸಂಜೆ 5.30 ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸವಿತಾ(22) ಕಳೆದ ಮೂರು ವರ್ಷಗಳ ಹಿಂದೆ ಇಂದರ್ ಸಿಂಗ್ ಪರ್ನಾರ್ ಅವರ ಪುತ್ರ ದೇವರಾಜ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಕೌಟುಂಬಿಕ ಸಮಸ್ಯೆ ಘಟನೆಗೆ ಕಾರಣ ಎಂದು ಹೇಳಲಾಗಿದೆ, ಆದರೂ ಪೊಲೀಸರು ಇನ್ನೂ ಏನನ್ನೂ ದೃಢೀಕರಿಸಿಲ್ಲ.
ಘಟನೆಯ ಸಮಯದಲ್ಲಿ, ಸಚಿವರು ಭೋಪಾಲ್‌ನಲ್ಲಿದ್ದರು, ಸವಿತಾ ಅವರ ಪತಿ ದೇವರಾಜ್ ಸಿಂಗ್ ಪಕ್ಕದ ಹಳ್ಳಿಯಾದ ಮೊಹಮ್ಮದ್ ಖೇರಾದಲ್ಲಿ ಮದುವೆಗೆ ಹಾಜರಾಗಿದ್ದರು. ಮನೆಯಲ್ಲಿ ಇತರ ಸಂಬಂಧಿಕರು ಇದ್ದರು.
ಮೃತದೇಹದ ಬಳಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಆಕೆಯ ನಿಧನದ ಸುದ್ದಿ ತಿಳಿದ ನಂತರ ಸಚಿವರು ಮತ್ತು ಮೃತರ ಪತಿ ಅವರ ಶಾಜಾಪುರ ನಿವಾಸಕ್ಕೆ ಆಗಮಿಸಿದರು. ಸಚಿವರ ನಿವಾಸದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.