ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಪ್ರಿಯಾಂಕಾ ಗುಪ್ತಾ ಅವರು 3,419 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಸ್ವೀಕರಿಸಿ ಆಘಾತಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಆಕೆಯ ಮಾವ ಕೂಡ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಪರೇಟರ್ ಮಾಡಿದ ದೋಷದಿಂದ ಹೀಗಾಗಿದೆ ಎಂದು ಮಧ್ಯಪ್ರದೇಶ ಸರ್ಕಾರ ನಡೆಸುತ್ತಿರುವ ವಿದ್ಯುತ್ ಕಂಪನಿ ಹೇಳಿದೆ. ನಂತರ 1,300 ರೂಪಾಯಿಗಳ ಸರಿಪಡಿಸಿದ ಬಿಲ್ ನೀಡಿದೆ.
ಗ್ವಾಲಿಯರ್ ನಗರದ ಶಿವವಿಹಾರ್ ಕಾಲೋನಿಯ ನಿವಾಸಿಗಳು ಆತಂಕದಲ್ಲಿರುವ ಗುಪ್ತಾ ಕುಟುಂಬದವರನ್ನು ಸಮಾಧಾನಪಡಿಸಿದ್ದಾರೆ.
ಗುಪ್ತಾ ಅವರ ಪತಿ ಸಂಜೀವ್ ಕಂಕಣೆ, ಮನೆಯ ಬಳಕೆಗಾಗಿ ಜುಲೈ ತಿಂಗಳ ವಿದ್ಯುತ್ ಬಿಲ್ ನಲ್ಲಿನ ಮೊತ್ತ ನೋಡಿದ ನಂತರ ತಂದೆ ಅನಾರೋಗ್ಯಕ್ಕೆ ಒಳಗಾದರು ಎಂದು ಹೇಳಿದ್ದಾರೆ.
ಜುಲೈ 20 ರಂದು ಮಧ್ಯಪ್ರದೇಶ ಮಧ್ಯ ಕ್ಷೇತ್ರ ವಿದ್ಯುತ್ ಮಿತ್ರನ್ ಕಂಪನಿಯ(MPMKVVC) ಪೋರ್ಟಲ್ ಮೂಲಕ ಬಿಲ್ ಪರಿಶೀಲಿಸಲಾಗಿದೆ. ಆದರೆ ಅದು ಸರಿಯಾಗಿದೆ ಎಂದು ಅವರು ಹೇಳಿದ್ದು, ನಂತರ ರಾಜ್ಯ ವಿದ್ಯುತ್ ಕಂಪನಿಯಿಂದ ಬಿಲ್ ಸರಿಪಡಿಸಲಾಗಿದೆ ಎಂದು ಕಂಕಣೆ ತಿಳಿಸಿದ್ದಾರೆ.
ಎಂಪಿಎಂಕೆವಿವಿಸಿ ಜನರಲ್ ಮ್ಯಾನೇಜರ್ ನಿತಿನ್ ಮಾಂಗ್ಲಿಕ್ ಅವರು, ಭಾರಿ ವಿದ್ಯುತ್ ಬಿಲ್ ಬರಲು ಕಾರಣವಾದ ಸಂಬಂಧಪಟ್ಟ ನೌಕರನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕ ಸಂಖ್ಯೆ ನಮೂದಿಸುವಲ್ಲಿ ಎಡವಟ್ಟು ಮಾಡಿದ ಕಾರಣ ಹೆಚ್ಚಿನ ಮೊತ್ತದೊಂದಿಗೆ ಬಿಲ್ ಬಂದಿದೆ. ವಿದ್ಯುತ್ ಗ್ರಾಹಕರಿಗೆ 1,300 ರೂ.ಗಳ ತಿದ್ದುಪಡಿ ಬಿಲ್ ನೀಡಲಾಗಿದೆ ಎಂದರು.