ಕುಡಿದ ಮತ್ತಿನಲ್ಲಿ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಉಗ್ರರ ದಾಳಿಗೆ ಸಂಚು ನಡೆಸಲಾಗ್ತಿದೆ ಎಂದು ಮಾಹಿತಿ ನೀಡಿದ್ದ ವ್ಯಕ್ತಿಯೋರ್ವನನ್ನ ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಜಿತೇಶ್ ಠಾಕುರ್, ಜನವರಿ ಆರನೇ ತಾರೀಖಿನಂದು ಮುಂಬೈ ಪೊಲೀಸರಿಗೆ ಸುಳ್ಳು ಕರೆ ಮಾಡಿದ್ದ ಎಂದು ತಿಳಿದು ಬಂದಿದೆ.
ನಿರುದ್ಯೋಗಿಯಾಗಿರುವ ಈತನಿಗೆ ಕುಡಿಯುವ ಚಟವಿದ್ದು, ಕುಡಿದ ಮತ್ತಿನಲ್ಲಿ ಕರೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಮುಂಬೈ ಪೊಲೀಸರು ನೀಡಿದ್ದ ಫೋನ್ ನಂಬರ್ ಅನ್ನು ಟ್ರೇಸ್ ಮಾಡಿ ಜಿತೇಶ್ ನನ್ನ ಬಂಧಿಸಿದ್ದೇವೆ ಎಂದು ಜಬಲ್ಪುರದ ಹೆಚ್ಚುವರಿ ಎಸ್ಪಿ ಗೋಪಾಲ್ ಖಂಡೇಲ್ ತಿಳಿಸಿದ್ದಾರೆ.
ತನ್ನನ್ನು ಭಾರತೀಯ ಆರ್ಮಿಯ ಅಧಿಕಾರಿ ಎಂದು ಹೇಳಿಕೊಂಡ ಕುಡುಕ ಜಿತೇಶ್, ಮುಂಬೈನಲ್ಲಿ ಉಗ್ರರ ದಾಳಿಗೆ ಸಂಚು ನಡೆದಿದೆ. ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ, ಕುರ್ಲಾ ರೈಲ್ವೇ ಸ್ಟೇಷನ್, ನವಿ ಮುಂಬೈನ ಗುರುದ್ವಾರ ಹಾಗೂ ನಟ ಶಾರುಖ್ ಖಾನ್ ಅವರ ವಾಸಸ್ಥಳ ಮನ್ನತ್ ಬಂಗಲೆ ಬಳಿ ಉಗ್ರರು ಬಾಂಬ್ ಅಳವಡಿಸಿದ್ದಾರೆ ಎಂದು ಹೇಳಿದ್ದಾನೆ.
ಅಲ್ಲದೆ ಉಗ್ರರು ನ್ಯೂಕ್ಲಿಯಾರ್ ಬಾಂಬ್ ದಾಳಿ ನಡೆಸಲಿದ್ದಾರೆ ಎಂದಿದ್ದಾನೆ. ಆತನ ಕರೆಯಿಂದ ಬೆಚ್ಚಿದ ಮುಂಬೈ ಪೊಲೀಸರು ಆತ ಹೇಳಿದ್ದ ಎಲ್ಲಾ ಸ್ಥಳಗಳನ್ನ ಪರಿಶೀಲಿಸಿದ್ದಾರೆ. ಆದರೆ ಎಲ್ಲಿಯೂ ಅನುಮಾನಾಸ್ಪದ ವಸ್ತುಗಳಾಗಲಿ, ವ್ಯಕ್ತಿಗಳಾಗಲಿ ಪತ್ತೆಯಾಗಿಲ್ಲ. ಆನಂತರ ಪೊಲೀಸರಿಗೆ ಇದು ಫೇಕ್ ಕಾಲ್ ಎಂದು ತಿಳಿದಿದೆ.
ಈ ವ್ಯಕ್ತಿ ಈ ಹಿಂದೆಯು ಇದೇ ರೀತಿ ಮಾಡಿದ್ದಾನೆ. ಸಧ್ಯ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದ್ದು ಆತನನ್ನ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಗೋಪಾಲ್ ಖಂಡೇಲ್ ತಿಳಿಸಿದ್ದಾರೆ.