ಅದು ಮಧ್ಯಪ್ರದೇಶದಲ್ಲಿ ನಡೆದ ಎನ್‌ಕೌಂಟರ್. ಆ ಎನ್‌ಕೌಂಟರ್‌ನಲ್ಲಿ ಛೋಟು ಪಠಾಣ್ ಸತ್ತೇ ಹೋದ ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ ಈಗ ಅದೇ ವ್ಯಕ್ತಿ ಸೋಶಿಯಲ್ ಮಿಡೀಯಾದಲ್ಲಿ ವಿಡಿಯೋ ಒಂದನ್ನ ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ಆ ವ್ಯಕ್ತಿ ನನ್ನ ಎನ್‌ಕೌಂಟರ್ ಆಗೇ ಇಲ್ಲ. ತಾನಿನ್ನು ಬದುಕೇ ಇದ್ದೇನೆ ಅಂತ ಹೇಳಿದ್ದಾನೆ.
ಈ ವಿಡಿಯೋದಲ್ಲಿ ಛೋಟು ಪಠಾಣ್ , ಕ್ಯಾಬಿನೆಟ್ ಸಚಿವ ಮಹಿಂದರ್ ಸಿಂಗ್ ಸಿಸೋಡಿಯಾ ಮತ್ತು ಬಿಜೆಪಿ ವಕ್ತಾರರಾದ ಡಾ. ಹಿತೇಢ್ ಬಾಜ್ಪೈ ಮತ್ತು ಪಂಕಜ್ ಚತುರ್ವೆದಿ ಇವರೆಲ್ಲರ ಮೇಲೆ ತನ್ನ ಬಗ್ಗೆ ಇಲ್ಲ ಸಲ್ಲದ ವದಂತಿಗಳನ್ನ ಸೃಷ್ಟಿಸಿದ್ದಾರೆ, ಜೊತೆಗೆ ಕಳ್ಳ ಬೇಟೆಗಾರರೊಂದಿಗೂ ತನ್ನ ಸಂಪರ್ಕ ಇದೆ ಅನ್ನೋ ಸುಳ್ಳು ಸುದ್ದಿ ಹರಡಿದ್ದಾರೆ ಎಂಬ ಆರೋಪ ಹೊರಿಸಿದ್ದಾನೆ.
‘ಪೊಲೀಸರನ್ನ ಕೊಂದ ಆರೋಪಿಗಳಿಗೆ ಶಿಕ್ಷೆಯಾಗಬೇಕು. ನನಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ನನಗೆ ಮೊದಲಿನಿಂದಲೂ ಬೇಟೆಯಾಡುವ ಹವ್ಯಾಸ ಇದೆ. ನನ್ನ ಬಳಿ ಬಂದೂಕು ಕೂಡಾ ಇದೆ. ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಬಳಿ ಕೇಳಿಕೊಳ್ಳೊದು ಏನೆಂದರೆ, ನನ್ನ ವಿರುದ್ಧ ಸಂಚು ಮಾಡಲಾಗುತ್ತಿದೆ. ನನಗೆ ನ್ಯಾಯ ಕೊಡಿಸಿ. ಎಂದು ಛೋಟು ಪಠಾಣ್ ಈ ವಿಡಿಯೋದಲ್ಲಿ ಹೇಳಿದ್ಧಾನೆ.
ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಲೋಕೇಂದ್ರ ಪರಾಶರ್ ಅವರು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಮತ್ತು ಮಾಜಿ ಸಚಿವ ಜೈವರ್ಧನ್ ಸಿಂಗ್ ಅವರೊಂದಿಗೆ ಇರೋ ಪಠಾಣ್ ಚಿತ್ರಗಳನ್ನ ಟ್ವೀಟ್ ಮಾಡಿದ್ದಾರೆ. ಇದೇ ಟ್ವೀಟ್ ಜೊತೆ ಅವರು ಒಂದು ಪ್ರಶ್ನೆಯನ್ನ ಸಹ ಕೇಳಿದ್ದಾರೆ. ‘ ಈ ಸಂಬಂಧಕ್ಕೆ ನೀವು ಏನು ಅಂತ ಕರೆಯುತ್ತಿರಾ..? ಇದರ ಬಗ್ಗೆ ನಿಮ್ಮ ವಿವರಣೆ ಏನು‘ ಅಂತ ಕೇಳಿದ್ದಾರೆ.
ಇದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ನಾಯಕ ಕೆಕೆ ಮಿಶ್ರಾ ‘ನನ್ನ ಬಿಜೆಪಿ ಮಿತ್ರರೇ, ಸುಳ್ಳು, ಮೋಸಕ್ಕೂ ಒಂದು ಮಿತಿ ಇದೆ. ಇದನ್ನ ನೋಡಿದ್ರೆ ದೇವರಿಗೂ ನಾಚಿಕೆಯಾಗುತ್ತೆ. ನೀವೇ ಹೇಳಿರೋ ಪ್ರಕಾರ ಆ ವ್ಯಕ್ತಿಯ ಎನ್‌ಕೌಂಟರ್ ಆಗಿದೆ ಅಂತ, ಈಗ ಅದೇ ವ್ಯಕ್ತಿ ಏನು ಹೇಳ್ತಿದ್ದಾನೆ ಕೇಳಿ. ವದಂತಿಗಳನ್ನ ಹರಡೋದಕ್ಕೂ ಒಂದು ಮಿತಿ ಇದೆ. ಸ್ವಲ್ಪ ಬುದ್ಧಿಯನ್ನ ಉಪಯೋಗಿಸಿ ಎಂದಿದ್ದಾರೆ.
ಗುನಾ ಜಿಲ್ಲೆಯಲ್ಲಿ 17 ಮೇ 2022ರಂದು ಪೊಲೀಸರು ಮತ್ತು ಕಳ್ಳಬೇಟೆಗಾರರ ನಡುವೆ ನಡೆದ ಚಕಮಕಿಯಲ್ಲಿ ಓರ್ವ ವ್ಯಕ್ತಿ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದ. ಅದೇ ವ್ಯಕ್ತಿ ಕೆಲ ದಿನಗಳ ಮುಂಚೆ ಮೂವರು ಪೊಲೀಸರನ್ನ ಕೊಂದಿದ್ದ ಅನ್ನೊ ಆರೋಪ ಕೂಡಾ ಇತ್ತು. ಈ ಎನ್ಕೌಂಟರ್ ಆದ ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿತ್ತು. ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರು ಎನ್‌ಕೌಂಟರ್ ನಲ್ಲಿ ಛೋಟು ಪಠಾಣ್ ಸತ್ತು ಹೋದ ಅಂತ ಹೇಳಿದ್ದರು. ಈಗ ಅದೇ ಛೋಟು ಪಠಾಣ್ ತಾನು ಸತ್ತೇ ಇಲ್ಲ ಅಂತ ಹೇಳಿ ವಿಡಿಯೋ ಒಂದನ್ನ ಮಾಡಿ ಕಳುಹಿಸಿದ್ದಾನೆ. ಈ ವಿಡಿಯೋ ವೈರಲ್ ಆಗ್ತಿರುವ ಹಾಗೆಯೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ. ಇದರ ಮಧ್ಯೆ ಸ್ಪಷ್ಟನೆ ನೀಡಿರುವ ಪೊಲೀಸರು ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದು ಛೋಟು ಖಾನ್ ಎಂದು ಹೇಳಿದ್ದಾರೆ.