ಮಧ್ಯ ಪ್ರದೇಶದ ಬಡ ಕೂಲಿ ಕಾರ್ಮಿಕನೊಬ್ಬನಿಗೆ ಅದೃಷ್ಟ ಒಲಿದಿದೆ. ಗಣಿಯಲ್ಲಿ ಸಿಕ್ಕ ವಜ್ರದಿಂದಾಗಿ ಈತ ರಾತ್ರೋರಾತ್ರಿ ಶ್ರೀಮಂತನಾಗಿದ್ದು, ಮುಂದಿನ ದಿನಗಳಲ್ಲಿ ತನ್ನ ಕಷ್ಟದ ದಿನಗಳು ಕಳೆದು ಕುಟುಂಬದೊಂದಿಗೆ ಸುಖ ಸಂತೋಷದಲ್ಲಿ ಕಳೆಯಲು ಬಯಸಿದ್ದಾನೆ.
ರಾಜು ಗೌಂಡ್ ಎಂಬ ಈ ಕೂಲಿ ಕಾರ್ಮಿಕನ ಕುಟುಂಬ ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇತ್ತು. ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿಕೊಂಡು ಈ ಬಡ ಕುಟುಂಬ ಜೀವನ ನಡೆಸುತ್ತಿತ್ತು. ಇದರ ಮಧ್ಯೆ ರಾಜು ಗೌಂಡ್ ತಂದೆ ತಮ್ಮ ಅದೃಷ್ಟ ಪರೀಕ್ಷಿಸುವ ಸಲುವಾಗಿ ತುಂಡು ಸರ್ಕಾರಿ ಭೂಮಿಯನ್ನು ಗುತ್ತಿಗೆಗೆ ಪಡೆದುಕೊಂಡಿದ್ದರು.
ಮಧ್ಯಪ್ರದೇಶದ ಪನ್ನಾ ನಗರ ಒಂದು ಕಾಲದಲ್ಲಿ ವಜ್ರಗಳಿಗೆ ಪ್ರಸಿದ್ಧಿಯಾಗಿದ್ದು ಈಗ ಮುಚ್ಚಿರುವ ಗಣಿಗಳ ಸೀಮಿತ ಪ್ರದೇಶವನ್ನು ಕೆಲ ದಿನಗಳ ಮಟ್ಟಿಗೆ 250 – 300 ರೂಪಾಯಿಗೆ ಗುತ್ತಿಗೆ ನೀಡುವ ಪರಿಪಾಠ ಇದೆ. ಈ ರೀತಿ ತನ್ನ ತಂದೆ ಗುತ್ತಿಗೆಗೆ ಪಡೆದಿದ್ದ ಜಾಗದಲ್ಲಿ ರಾಜು ಗೌಂಡ್ ಗೆ 19.22 ಕ್ಯಾರೆಟ್ ತೂಕದ ವಜ್ರ ಸಿಕ್ಕಿದೆ.
ಇದನ್ನು ಸರ್ಕಾರಿ ಅಧಿಕಾರಿಗಳು ಮೌಲ್ಯಮಾಪನ ಮಾಡಿದ್ದು, ಇದರ ಬೆಲೆ 80 ಲಕ್ಷ ರೂಪಾಯಿಗಳು ಎಂದು ಹೇಳಲಾಗಿದೆ. ಕೂಲಿನಾಲಿ ಮಾಡಿಕೊಂಡು ಜೊತೆಗೆ ಸಾಲವನ್ನು ಹೊಂದಿದ್ದ ರಾಜುಗೌಂಡ್ ಕುಟುಂಬ ತಮಗೆ ಬರುವ 80 ಲಕ್ಷ ರೂಪಾಯಿ ಹಣದಲ್ಲಿ ಸಾಲ ತೀರಿಸಿ ನೆಮ್ಮದಿಯ ಜೀವನ ನಡೆಸುವ ಇರಾದೆ ಹೊಂದಿದೆ.