ಗ್ರಾಮ ಪಂಚಾಯಿತಿ ಕಾರ್ಯದಶಿಯೊಬ್ಬರು ಕುರುಕುಳ ಕೊಟ್ಟರು ಎಂದು ಆರೋಪ ಮಾಡಿ ವಿಡಿಯೋ ರೆಕಾರ್ಡ್ ಮಾಡಿದ 40 ವರ್ಷದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯ ಪ್ರದೇಶದ ನೀಮುಚ್ ಜಿಲ್ಲೆಯ ಜಾವದ್ ತಾಲ್ಲೂಕಿನಲ್ಲಿ ಜರುಗಿದೆ.
ಇಲ್ಲಿನ ಅತಾನಾ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. 40 ವರ್ಷ ವಯಸ್ಸಿನ ಧನಲಾಲ್ ಗಾಯ್ರಿ ಹೆಸರಿನ ಈ ವ್ಯಕ್ತಿಗೆ ಆಸ್ತಿ ವಿಚಾರದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪ್ರೇಮ್ ಚಂದ್ ಮಾಲಿ ಕೆಲ ಕಾಲದಿಂದ ಬ್ಲಾಕ್‌ಮೇಲ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಆಸ್ತಿಯೊಂದನ್ನು ಖರೀದಿಸಲು ಮಾಲಿ ಗಾಯ್ರಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ. ಈ ವೇಳೆ ನಕಲಿ ಡೀಡ್ ಒಂದರ ಮೂಲಕ ಗಾಯ್ರಿಯಿಂದ 30 ಲಕ್ಷ ರೂ. ಗಳನ್ನು ಮಾಲಿ ಪಡೆದುಕೊಂಡಿದ್ದಾನೆ. ಈ ವಿಚಾರ ತಿಳಿದ ಬಳಿಕ ತನ್ನ ದುಡ್ಡು ಮರಳಿ ನೀಡಲು ಮಾಲಿಯನ್ನು ಕೇಳಿದ ಗಾಯ್ರಿಗೆ, ತನ್ನ ವಿರುದ್ಧ ಸುಳ್ಳು ದೂರು ದಾಖಲಿಸುವುದಾಗಿ ಬೆದರಿಕೆ ಬಂದಿದ್ದು, ದುಡ್ಡು ಮರಳಿ ಕೇಳದಂತೆ ತಾಕೀತು ಮಾಡಿದ್ದಾನೆ ಪಂಚಾಯಿತಿ ಕಾರ್ಯದರ್ಶಿ.
ಜಿಲ್ಲಾಸ್ಪತ್ರೆಯಲ್ಲಿ ಮೃತರ ಸಂಬಂಧಿಕರು ಗ್ರಾ.ಪಂ ಕಾರ್ಯದರ್ಶಿ ವಿರುದ್ಧ ಪ್ರತಿಭಟನೆ ಮಾಡಿ, ಮಾಲಿ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಕೋರಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಡಿಎಸ್‌ಪಿ ವಿಮ್ಲೇಶ್ ಉಯ್ಕೇ ಹಾಗೂ ಠಾಣಾಧಿಕಾರಿ ಯೋಗೇಂದ್ರ ಸಿಂಗ್ ಸಿಸೋಡಿಯಾ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.
ವಿಡಿಯೋದಲ್ಲಿ ಮಾಡಲಾದ ಆಪಾದನೆಗಳ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಹೆಚ್ಚುವರಿ ಎಸ್‌ಪಿ ಸುರೀಂದರ್ ಸಿಂಗ್ ಕನೇಶ್ ತಿಳಿಸಿದ್ದಾರೆ.