ಆಘಾತಕಾರಿ ಘಟನೆಯೊಂದರಲ್ಲಿ ಜೇನುನೊಣಗಳ ದಾಳಿಗೆ ಹೆದರಿದ ವ್ಯಕ್ತಿಯೊಬ್ಬರು ಗುಜರಾತ್ ನ ಖಾಂಡ್ವಾದ ಜಿಲ್ಲಾ ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದುರಂತವೆಂದರೆ ಮೃತರ ಪತ್ನಿ ಭಾನುವಾರ ಸಂಜೆ ಅದೇ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳ ನಂತರ ಸೋಮವಾರ ಬೆಳ್ಳಂಬೆಳಗ್ಗೆ ಈ ಘಟನೆ ವರದಿಯಾಗಿದೆ. ಘಟನೆಯ ನಂತರ ಸಂತಸ ತುಂಬಿದ್ದ ಕುಟುಂಬದಲ್ಲಿ ಕತ್ತಲೆ ಕವಿದಿದೆ.
ಮಾಹಿತಿ ಪ್ರಕಾರ ಮೃತರನ್ನು ಸಚಿನ್ ಸೋಲಂಕಿ ಎಂದು ಗುರುತಿಸಲಾಗಿದ್ದು ಅವರು ಖಾಂಡ್ವಾ ಜಿಲ್ಲೆಯ ಸಿಂಗೋಟ್‌ನ ರಾಂಪುರ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಭಾನುವಾರ ಸಂಜೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಚಿನ್ ತನ್ನ ಪತ್ನಿ ಛಾಯಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಮೂರನೇ ಮಹಡಿಯ ಸೀಲಿಂಗ್‌ನಲ್ಲಿ ಸಾವಿರಾರು ಜೇನುನೊಣಗಳು ಗುಂಪು ಗುಂಪಾಗಿ ಸಚಿನ್ ಮತ್ತು ಅವರ ಸೋದರ ಮಾವ ರಾಜೇಶ್ ಮಲಗಿದ್ದ ವಾರ್ಡ್ ಮತ್ತು ಕಾರಿಡಾರ್‌ನ ಸುತ್ತಲೂ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಹರಡಿದ್ವು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಜೇನುನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಚಿನ್ ಆಸ್ಪತ್ರೆಯ ಮೂರನೇ ಮಹಡಿಯಿಂದ ಹಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಸಚಿನ್ ಮತ್ತು ಅವರ ಪತ್ನಿ ಛಾಯಾ ಅವರು ತಮ್ಮ ಮದುವೆಯಾದ 4 ವರ್ಷಗಳ ನಂತರ ತಮ್ಮ ಮೊದಲ ಮಗುವಿಗೆ ಪೋಷಕರಾಗಿದ್ದರು. ಆದರೆ ಈಗ ಸಚಿನ್ ಸಾವಿನ ಘಟನೆಯ ನಂತರ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ.
ಸಚಿನ್ ಸಾವಿನ ನಂತರ ಜೈ ಆದಿವಾಸಿ ಯುವ ಶಕ್ತಿ (ಜೆಎವೈಎಸ್) ಸದಸ್ಯರು ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜೇನುಗೂಡು ತೆಗೆದಿದ್ದಲ್ಲಿ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಸಚಿನ್ ಸಾವಿನಿಂದ ಕುಟುಂಬಸ್ಥರು ಶೋಕದಲ್ಲಿ ಮುಳುಗಿದ್ದರೆ, ಮತ್ತೊಂದೆಡೆ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ. ಸದ್ಯ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.