ಮಧ್ಯಪ್ರದೇಶದ ಇಂದೋರ್‌ನಲ್ಲಿ 4ನೇ ತರಗತಿಯ ವಿದ್ಯಾರ್ಥಿಗೆ ತನ್ನ ಸಹಪಾಠಿಗಳು 108 ಬಾರಿ ಇರಿದಿರುವ ಭಯಾನಕ ಘಟನೆ ಸೋಮವಾರ ನಡೆದಿದೆ.
ಮಕ್ಕಳ ಕಲ್ಯಾಣ ಸಮಿತಿಯು(ಸಿಡಬ್ಲ್ಯುಸಿ) ಘಟನೆಯ ಬಗ್ಗೆ ಗಮನಹರಿಸಿದೆ ಮತ್ತು ಪೊಲೀಸರಿಂದ ತನಿಖಾ ವರದಿಯನ್ನು ಕೇಳಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಡಬ್ಲ್ಯೂಸಿ ಅಧ್ಯಕ್ಷೆ ಪಲ್ಲವಿ ಪೋರ್ವಾಲ್, ನವೆಂಬರ್ 24 ರಂದು ಏರೋಡ್ರೋಮ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ನಡೆದ ಜಗಳದಲ್ಲಿ ವಿದ್ಯಾರ್ಥಿಯ ಮೇಲೆ ಸಹಪಾಠಿಗಳು ಜ್ಯಾಮಿತಿ ಕಂಪಾಸ್‌ನಿಂದ 108 ಬಾರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನ. 24 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಶಾಲೆಯಲ್ಲಿ ನಡೆದ ದಾಳಿಯಲ್ಲಿ ಬಾಲಕನಿಗೆ ಭಯವಾಗಿದೆ. ನನ್ನ ಮಗ ಮನೆಗೆ ಹಿಂದಿರುಗಿದ ನಂತರ ಈ ಘಟನೆಯನ್ನು ವಿವರಿಸಿದ್ದಾನೆ. ಅವನ ಸಹಪಾಠಿಗಳು ಏಕೆ ಹಿಂಸಾತ್ಮಕವಾಗಿ ನಡೆಸಿಕೊಂಡರು ಎಂದು ನನಗೆ ಇನ್ನೂ ತಿಳಿದಿಲ್ಲ. ಶಾಲೆಯ ಆಡಳಿತ ಮಂಡಳಿ ತರಗತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುತ್ತಿಲ್ಲ ಎಂದು ಸಂತ್ರಸ್ತನ ತಂದೆ ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಏರೋಡ್ರೋಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ವಿವೇಕ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಮಕ್ಕಳು 10 ವರ್ಷದೊಳಗಿನವರಾಗಿದ್ದು, ಕಾನೂನು ನಿಬಂಧನೆಗಳ ಪ್ರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.