ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಶೂ ಸೇರಿದಂತೆ ಇತರ ಉತ್ಪನ್ನಗಳನ್ನು ಮಾರಾಟ ಮಾಡಿದ, ಇ-ಕಾಮರ್ಸ್ ದೈತ್ಯ ಅಮೆಜಾನ್ ಅಧಿಕಾರಿಗಳು ಮತ್ತು ಅದರ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಧ್ಯಪ್ರದೇಶ ಸರ್ಕಾರ ಪೊಲೀಸರಿಗೆ ಸೂಚನೆ ನೀಡಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿಕೆ ನೀಡಿದ್ದಾರೆ.
ಅಮೆಜಾನ್ ಭಾರತೀಯ ಧ್ವಜದ ಚಿತ್ರಗಳನ್ನು ಒಳಗೊಂಡಿರುವ ಉಡುಪುಗಳು ಮತ್ತು ಆಹಾರ ಪದಾರ್ಥಗಳು ಸೇರಿದಂತೆ ಕೆಲವು ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಭಾರತೀಯರ ಕೋಪಕ್ಕೆ ತುತ್ತಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಭಾರತೀಯರು ಇ-ಕಾಮರ್ಸ್ ದೈತ್ಯನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತ್ರಿವರ್ಣ ಧ್ವಜವನ್ನು ಈ ರೀತಿಯಲ್ಲಿ ಬಳಸುವುದು ದೇಶಕ್ಕೆ ಮಾಡುವ ಅವಮಾನ ಎಂದು ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಮಾರಾಟ ಮಾಡುವ ಉತ್ಪನ್ನಗಳ ಮೇಲೆ ನಮ್ಮ ರಾಷ್ಟ್ರಧ್ವಜವನ್ನು ಬಳಸಿರುವುದು ನನ್ನ ಗಮನಕ್ಕೆ ಬಂದಿದೆ. ರಾಷ್ಟ್ರಧ್ವಜವನ್ನು ಶೂಗಳ ಮೇಲೆ ಬಳಸಿರುವುದನ್ನ ಸಹಿಸುವುದಿಲ್ಲ. ಮೇಲ್ನೋಟಕ್ಕೆ ಇದು ರಾಷ್ಟ್ರೀಯ ಧ್ವಜ ಸಂಹಿತೆಯ ಉಲ್ಲಂಘನೆಯಾಗಿದೆ. ಅಮೆಜಾನ್‌ನ ಅಧಿಕಾರಿಗಳು ಮತ್ತು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಾನು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನಿರ್ದೇಶನ ನೀಡಿದ್ದೇನೆ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಅಮೆಜಾನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಗೃಹ ಸಚಿವ ಮಿಶ್ರಾ ಪೊಲೀಸರಿಗೆ ಸೂಚಿಸಿರುವುದು ಇದೇ ಮೊದಲಲ್ಲ. ನವೆಂಬರ್ ತಿಂಗಳಲ್ಲಿ ಅಮೆಜಾನ್ ಮೂಲಕ ವಿಷಕಾರಿ ಸಲ್ಫಾಸ್ (ಕೃಷಿ ಫ್ಯೂಮಿಗಂಟ್ ಆಗಿ ಬಳಸುವ ವಿಷಕಾರಿ ಔಷಧಿ) ಮಾತ್ರೆಗಳನ್ನು ಖರೀದಿಸಿ ಅವುಗಳನ್ನ ಸೇವಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಸಂದರ್ಭದಲ್ಲೂ ಮಿಶ್ರಾ ಅವರು ಅಮೆಜಾನ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದರು.