ಭೋಪಾಲ್: ಮಧ್ಯಪ್ರದೇಶದ ಕಟ್ನಿಯಲ್ಲಿ ಕಳ್ಳತನ ಶಂಕೆಯ ಮೇಲೆ ಬಂಧಿಸಿ ಅಪ್ರಾಪ್ತ ಬಾಲಕ ಮತ್ತು ಅವನ ಅಜ್ಜಿಯನ್ನು ಥಳಿಸಿದ ಆರೋಪದ ಮೇಲೆ ಸರ್ಕಾರಿ ರೈಲ್ವೇ ಪೊಲೀಸ್(ಜಿಆರ್‌ಪಿ) ಪೋಸ್ಟ್‌ನ ಇನ್ಸ್ ಪೆಕ್ಟರ್ ಸೇರಿದಂತೆ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಗುರುವಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್(ರೈಲ್ವೆ) ಪ್ರಾಥಮಿಕ ತನಿಖೆಯಲ್ಲಿ ಇನ್‌ಸ್ಪೆಕ್ಟರ್ ಅರುಣಾ ವಾಹನೆ ತಪ್ಪಿತಸ್ಥರೆಂದು ಕಂಡು ಬಂದ ಹಿನ್ನಲೆಯಲ್ಲಿ ಕ್ರಮ ಕೈಗೊಂಡಿದ್ದಾರೆ. ಕಾನ್‌ಸ್ಟೆಬಲ್‌ಗಳಾದ ವರ್ಷಾ ದುಬೆ, ಓಂಕಾರ್ ಸಿರ್ಶಮ್, ಸೋಹೇಬ್ ಅಬ್ಬಾಸಿ, ಸಲ್ಮಾನ್ ಖಾನ್ ಮತ್ತು ಹೆಡ್ ಕಾನ್‌ಸ್ಟೆಬಲ್ ಅಜಯ್ ಶ್ರೀವಾಸ್ತವ ಅವರನ್ನೂ ಅಮಾನತುಗೊಳಿಸಿದ್ದಾರೆ.
ಮಹಿಳಾ ಅಧಿಕಾರಿಯೊಬ್ಬರು ವೃದ್ಧ ಮಹಿಳೆಗೆ ಕೋಲಿನಿಂದ ಥಳಿಸಿದ ಘಟನೆಯ ವಿಡಿಯೋವನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತೇಂದ್ರ ಪಟ್ವಾರಿ ಅವರು ಶೇರ್ ಮಾಡಿದ್ದಾರೆ.
ಅಕ್ಟೋಬರ್ 2023 ರಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದೆ. ಯಾರೋ ಈಗ ಅದನ್ನು ವೈರಲ್ ಮಾಡಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಸಿಮಲಾ ಪ್ರಸಾದ್ ಹೇಳಿದ್ದಾರೆ.
ಮುಖ್ಯಮಂತ್ರಿ ಮೋಹನ್ ಯಾದವ್ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.