ಬೆತುಲ್: ಹಣ ಕದ್ದಿದ್ದಾಳೆ ಎನ್ನುವ ಶಂಕೆಯ ಮೇಲೆ ಹಾಸ್ಟೆಲ್‌ನ ಸೂಪರಿಂಟೆಂಡೆಂಟ್ 5 ನೇ ತರಗತಿಯ ವಿದ್ಯಾರ್ಥಿನಿಯನ್ನು ಚಪ್ಪಲಿ ಹಾರದೊಂದಿಗೆ ಮೆರವಣಿಗೆ ಮಾಡಿರುವ ಅಮಾನುಷ ಘಟನೆ ಮಧ್ಯಪ್ರದೇಶದ ಬೆತುಲ್ನಲ್ಲಿ ನಡೆದಿದೆ.
ದಾಮ್ಜಿಪುರ ಗ್ರಾಮದ ಸರ್ಕಾರಿ ಗಿರಿಜನ ಬಾಲಕಿಯರ ವಸತಿ ನಿಲಯದಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. ಘಟನೆಯ ಕುರಿತು ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಡುವೆ ಹಾಸ್ಟೆಲ್‌ನ ಅಧೀಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ.
ತನ್ನ ಮಗಳಿಗೆ ದೆವ್ವದಂತೆ ಕಾಣಲು ಮೇಕಪ್ ಮಾಡಿ, ಚಪ್ಪಲಿ ಹಾರವನ್ನು ಹಾಕಿ ಹಾಸ್ಟೆಲ್ ಆವರಣದಲ್ಲಿ ಮೆರವಣಿಗೆ ಮಾಡಿರುವುದಾಗಿ ಬಾಲಕಿಯ ತಂದೆ ದೂರು ದಾಖಲಿಸಿದ್ದರು. ಮಗಳು 400 ರೂ. ಕದ್ದಿರುವುದಾಗಿ ಸುಮ್ಮನೆ ಆರೋಪ ಹೊರಿಸಿ ಈ ರೀತಿ ಅಮಾನುಷವಾಗಿ ನಡೆಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದೆ.