
ತನ್ನ ಸಹೋದರ ಮಾವನೊಂದಿಗೆ ಕಾರಿನಲ್ಲಿ ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದ ಬಾಲಕಿಯೊಬ್ಬಳು ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಮಧ್ಯ ಪ್ರದೇಶದ ಜಬಲ್ಪುಪರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕಟಾಂಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲ್ಖಾಡುವಿನಲ್ಲಿ ಈ ಅಪಘಾತ ಸಂಭವಿಸಿದೆ.
“ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ತನ್ನ ಸಹೋದರಿಯ ಪುತ್ರಿಯನ್ನು ಪರೀಕ್ಷೆಗೆ ಹಾಜರಾಗಲು ಕರೆದೊಯ್ಯುತ್ತಿದ್ದರು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ,” ಎಂದು ಕಟಾಂಗಿ ಪೊಲೀಸ್ ಠಾಣಾಧಿಕಾರಿ ಶಿವಮಂಗಲ್ ಸಿಂಗ್ ತಿಳಿಸಿದ್ದಾರೆ.
ಕಾರಿಗೆ ಗುದ್ದಿದ ಬಸ್ಸಿನ ಚಾಲಕ ಸ್ಥಳದಲ್ಲೇ ತನ್ನ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಕಾರಿನಲ್ಲಿ ಸಿಕ್ಕ ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸುವ ಯತ್ನದಲ್ಲಿ ಬಸ್ಸು ಹಾಗೂ ಕಾರುಗಳು ಪರಸ್ಪರ ಗುದ್ದಿಕೊಂಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.