ಪನ್ನಾ: ವಜ್ರದ ಗಣಿಗಳಿಗೆ ಹೆಸರುವಾಸಿಯಾದ ಪನ್ನಾದಲ್ಲಿನ ಸಣ್ಣ, ಗುತ್ತಿಗೆ ಪಡೆದ ಗಣಿಯಲ್ಲಿ 11.88 ಕ್ಯಾರೆಟ್ ಉತ್ತಮ ಗುಣಮಟ್ಟದ ವಜ್ರವೊಂದು ಸಿಕ್ಕಿದ್ದು, ಬಡ ರೈತನ ಜೀವನ ಬದಲಿಸಿದೆ.
ಮಧ್ಯಪ್ರದೇಶದ ರೈತನಿಗೆ ಅದೃಷ್ಟ ಖುಲಾಯಿಸಿದೆ. ಕೂಲಿ ಕೆಲಸ ಮಾಡುತ್ತಿರುವ ಸಣ್ಣ ರೈತ ಪ್ರತಾಪ್ ಸಿಂಗ್ ಯಾದವ್ ಅವರಿಗೆ ಪನ್ನಾ ಜಿಲ್ಲೆಯ ಪಟ್ಟಿ ಪ್ರದೇಶದ ಗಣಿಯಲ್ಲಿ ಈ ವಜ್ರ ದೊರೆತಿದೆ. ರೈತನ ಮನೆಯಲ್ಲಿ ಹಬ್ಬದ ವಾತಾವರಣ ಕಂಡು ಬಂದಿದೆ ಎಂದು ವಜ್ರ ಅಧಿಕಾರಿ ರವಿ ಪಟೇಲ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಉತ್ತಮ ಗುಣಮಟ್ಟದ ಈ ವಜ್ರವನ್ನು ಮುಂಬರುವ ಹರಾಜಿನಲ್ಲಿ ಮಾರಾಟಕ್ಕೆ ಇಡಲಾಗುವುದು ಮತ್ತು ಸರ್ಕಾರದ ಮಾರ್ಗಸೂಚಿಯಂತೆ ಬೆಲೆಯನ್ನು ನಿಗದಿಪಡಿಸಲಾಗುವುದು.
ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ನಾನು ಸಣ್ಣ ಕೃಷಿ ಭೂಮಿ ಹೊಂದಿರುವ ಬಡ ವ್ಯಕ್ತಿ. ನಾನೂ ಕೂಲಿ ಕೆಲಸ ಮಾಡುತ್ತೇನೆ. ನಾನು ಕಳೆದ ಮೂರು ತಿಂಗಳಿನಿಂದ ಈ ಗಣಿಯಲ್ಲಿ ಕಷ್ಟಪಟ್ಟು ಈ ವಜ್ರವನ್ನು ಪಡೆದು ಡೈಮಂಡ್ ಆಫೀಸ್ ಗೆ ಹಾಕಿದ್ದೇನೆ. ಈ ವಜ್ರದ ಹರಾಜಿನಿಂದ ಬಂದ ಹಣವನ್ನು ವ್ಯಾಪಾರವನ್ನು ಸ್ಥಾಪಿಸಲು ಮತ್ತು ಅವರ ಮಕ್ಕಳ ಶಿಕ್ಷಣಕ್ಕಾಗಿ ಬಳಸಲಾಗುವುದು ಎಂದು ತಿಳಿಸಿದ್ದಾರೆ.
ಖಾಸಗಿ ಅಂದಾಜಿನ ಪ್ರಕಾರ, ವಜ್ರವು ಹರಾಜಿನಲ್ಲಿ 50 ಲಕ್ಷ ರೂ.ಗೂ ಹೆಚ್ಚು ಬೆಲೆ ಬಾಳಬಹುದು. ಕಚ್ಚಾ ವಜ್ರವನ್ನು ಹರಾಜು ಹಾಕಲಾಗುವುದು ಮತ್ತು ಆದಾಯವನ್ನು ಸರ್ಕಾರದ ರಾಯಧನ ಮತ್ತು ತೆರಿಗೆಯನ್ನು ಕಡಿತಗೊಳಿಸಿದ ನಂತರ ರೈತರಿಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.