ಟ್ರ್ಯಾಕ್ಟರ್ ನಲ್ಲಿ ಮಂಡಿಗೆ ಗೋಧಿ ಸಾಗಿಸ್ತಿದ್ದ ವೇಳೆ ರಸ್ತೆಯಲ್ಲಿ ಚೆಲ್ಲಿದ ಗೋಧಿಯನ್ನು ಆಯ್ದುಕೊಳ್ಳುವಾಗ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು ಓರ್ವ ಗಾಯಗೊಂಡಿರೋ ದುರಂತ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 59 ರಲ್ಲಿ ನಡೆದಿದೆ.
ಸೋಮವಾರ ತಡರಾತ್ರಿ ಸರ್ದಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದೋರ್-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ.
ಮುನ್ನಾ ಲಾಲ್ ಎಂಬ ರೈತ ಟ್ರ್ಯಾಕ್ಟರ್‌ನಲ್ಲಿ ರಾಜ್‌ಗಢ್ ಮಂಡಿಗೆ ಗೋಧಿಯನ್ನು ಸಾಗಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ದೇವೇಂದ್ರ ಪಾಟಿದಾರ್ ಹೇಳಿದ್ದಾರೆ.
“ರೈತನು ತನ್ನ ಮಗನಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ ನಂತರ ಆತನ ಮಗ ಇನ್ನೊಬ್ಬ ವ್ಯಕ್ತಿಯೊಂದಿಗೆ ಸ್ಥಳಕ್ಕೆ ತಲುಪಿ ರಸ್ತೆಯಿಂದ ಚೆಲ್ಲಿದ್ದ ಗೋಧಿಯನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಈ ವೇಳೆ ವೇಗವಾಗಿ ಬಂದ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು ಒಬ್ಬರಿಗೆ ಗಾಯಗಳಾಗಿವೆ” ಎಂದು ಎಎಸ್ ಪಿ ದೇವೇಂದ್ರ ಪಾಟಿದಾರ್ ತಿಳಿಸಿದ್ದಾರೆ.
ಮೃತರನ್ನು ಮುನ್ನಾ ಲಾಲ್ (47), ಅವರ ಮಗ ನವದೀಪ್ (29), ಟ್ರ್ಯಾಕ್ಟರ್ ಚಾಲಕ ಲುವ್ ಕುಶ್ (28) ಮತ್ತು ಹಿಮ್ಮತ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ನವದೀಪ್ ಅವರ ಸ್ನೇಹಿತ ಸಂದೀಪ್ (26) ಎಂದು ಗುರುತಿಸಲಾಗಿದೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಶವಗಳನ್ನು ಸರ್ದಾರ್‌ಪುರದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಡಿಕ್ಕಿ ಹೊಡೆದ ವಾಹನವನ್ನು ವಶಪಡಿಸಿಕೊಂಡು ಅದರ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.