
ಬೆಂಗಳೂರು: ಲೋಕಸಭೆ ಚುನಾವಣೆ ಸಿದ್ಧತೆ ಆರಂಭಿಸಲು ಇಂದು ಬಿಜೆಪಿ ಮಹತ್ವದ ಸಭೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪಕ್ಷದ ನಾಯಕರಾದ ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ ಮೊದಲಾದ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಲು ಬಿಜೆಪಿ ಹಿರಿಯ ಮುಖಂಡರ ಚಿಂತನಾ ಸಭೆ ಯಲಹಂಕ ಬಳಿ ಇರುವ ರೆಸಾರ್ಟ್ ನಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯಲಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಿರುವ ಕಾರ್ಯತಂತ್ರ ಕುರಿತಾಗಿ ನಾಯಕರು ಚರ್ಚೆ ನಡೆಸಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಲೋಪಗಳು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸುವುದು, ಜೆಡಿಎಸ್ ಜೊತೆಗಿನ ಮೈತ್ರಿ, ಕ್ಷೇತ್ರಗಳ ಹಂಚಿಕೆ, ಸ್ಥಳೀಯ ಮುಖಂಡರು, ಕಾರ್ಯಕರ್ತರ ನಡುವೆ ಹೊಂದಾಣಿಕೆ ಸಮಸ್ಯೆ ಆಗದಂತೆ ಕ್ರಮ ಮೊದಲಾದವುಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎನ್ನಲಾಗಿದೆ.