ರೇವಾ: ಮಹಿಳಾ ಪೊಲೀಸ್ ಪೇದೆಯ ಮೈಮೇಲೆ ಆಕಸ್ಮಿಕವಾಗಿ ಕೆಸರೆರಚಿದ ವ್ಯಕ್ತಿಯ ಬಳಿ ತನ್ನ ಪ್ಯಾಂಟ್ ಒರೆಸುವಂತೆ ಹೇಳಿದ್ದಲ್ಲದೆ, ನಂತರ ಆತನಿಗೆ ಕಪಾಳಮೋಕ್ಷ ಮಾಡಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ರೇವಾದ ಸಿರ್ಮೌರ್ ಚೌಕ್ ಬಳಿ ಈ ಘಟನೆ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಆಘಾತಕಾರಿ ವಿಡಿಯೋದಲ್ಲಿ, ಮಹಿಳಾ ಪೊಲೀಸ್ ಪೇದೆಯೊಬ್ಬರು ತನ್ನ ಪ್ಯಾಂಟ್ ಮೇಲೆ ಕೆಸರೆರಚಿದ್ದಕ್ಕೆ ವ್ಯಕ್ತಿ ಬಳಿ ಒರೆಸಲು ಹೇಳಿದ್ದಾರೆ. ಆತ ಆಕೆಯ ಬಿಳಿ ಬಣ್ಣದ ಪ್ಯಾಂಟ್ ಅನ್ನು ಸ್ವಚ್ಛಗೊಳಿಸಿದ್ದಾನೆ. ನಂತರ ಆತನಿಗೆ ಮಹಿಳಾ ಪೇದೆ ಕಪಾಳಮೋಕ್ಷ ಮಾಡಿದ್ದಾರೆ.
ಮಹಿಳಾ ಪೇದೆಯು ತಲೆಗೆ ಬಿಳಿ ದುಪಟ್ಟಾ ಸುತ್ತಿಕೊಂಡಿರುವುದರಿಂದ ಅವರ ಮುಖದ ಗುರುತು ಕಾಣಿಸುತ್ತಿಲ್ಲ. ನಂತರ ಅವರನ್ನು ಗೃಹರಕ್ಷಕ ದಳದ ಕಾನ್ಸ್ಟೇಬಲ್ ಶಶಿಕಲಾ ಎಂದು ಗುರುತಿಸಲಾಗಿದೆ. ಆದರೆ, ವ್ಯಕ್ತಿಯು ಮಣ್ಣು ಎರಚಿದ ದೃಶ್ಯ ಮಾತ್ರ ಎಲ್ಲೂ ಕಂಡುಬಂದಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಎಸ್ಪಿ ಗಮನಕ್ಕೂ ಬಂದಿದೆ. ವ್ಯಕ್ತಿಯು ಮಹಿಳಾ ಪೇದೆಯ ಪ್ಯಾಂಟ್ ಅನ್ನು ಬಲವಂತವಾಗಿ ಸ್ವಚ್ಫಗೊಳಿಸುತ್ತಿರುವಂತೆ ತೋರುತ್ತಿದೆ.
ಸಂಬಂಧಪಟ್ಟವರು ಈ ಬಗ್ಗೆ ದೂರು ನೀಡಿದ್ರೆ ನಾವು ತನಿಖೆ ಮಾಡುತ್ತೇವೆ ಎಂದು ಹೆಚ್ಚುವರಿ ಎಸ್ಪಿ ಶಿವಕುಮಾರ್ ಹೇಳಿದ್ದಾರೆ.