ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ತರಕಾರಿ ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಗುಂಪು ವಿಶಿಷ್ಟ ಪ್ರತಿಭಟನೆಯನ್ನು ನಡೆಸಿದೆ.
ಮಾರುಕಟ್ಟೆಯಲ್ಲಿ ಬ್ರೀಫ್‌ಕೇಸ್ ಮತ್ತು ಸಾಂಕೇತಿಕ ನಕಲಿ ಗನ್ ನೊಂದಿಗೆ ತರಕಾರಿಗಳನ್ನು ಖರೀದಿಸಲಾಗಿದೆ. ಪ್ರತಿಭಟನೆ ವೇಳೆ ಕಾಂಗ್ರೆಸ್ ಮುಖಂಡರು ಮಾರುಕಟ್ಟೆಯಿಂದ ತರಕಾರಿಗಳನ್ನು ಬ್ರೀಫ್ ಕೇಸ್ ನಲ್ಲಿ ತಂದು ಲಾಕರ್ ನಲ್ಲಿಟ್ಟಿದ್ದರು.
ಕಾಂಗ್ರೆಸ್ ವಕ್ತಾರ ವಿಕ್ಕಿ ಖೋಂಗಲ್, ಮಧ್ಯಪ್ರದೇಶ ಮತ್ತು ದೇಶದಲ್ಲಿ ಆಹಾರ ಪದಾರ್ಥಗಳು ಮತ್ತು ತರಕಾರಿಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ, ಇಂದು ನಾವು ಪ್ರತಿಭಟನೆ ನಡೆಸಿದ್ದೇವೆ. ಸಾಂಕೇತಿಕವಾಗಿ ನಕಲಿ ಬಂದೂಕನ್ನು ನಮ್ಮೊಂದಿಗೆ ತೆಗೆದುಕೊಂಡಿದ್ದೇವೆ. ಈ ಕಿವುಡ ಮತ್ತು ಮೂಗ ಸರ್ಕಾರಕ್ಕೆ ಭ್ರಷ್ಟಾಚಾರ ಮತ್ತು ಹಣದುಬ್ಬರದಂತಹ ವಿಷಯಗಳ ಬಗ್ಗೆ ತಿಳಿಸಲು ಹೀಗೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಮೊದಲು ಬೆಲೆಬಾಳುವ ವಸ್ತುಗಳನ್ನು(ಚಿನ್ನ, ಬೆಳ್ಳಿ, ವಜ್ರ, ಮುತ್ತುಗಳು) ಭದ್ರತೆಯಲ್ಲಿ ತಂದು ಇಡಬೇಕಾಗಿತ್ತು. ಅದೇ ರೀತಿ ಮುಂದಿನ ದಿನಗಳಲ್ಲಿ ತರಕಾರಿ ಮತ್ತು ಆಹಾರ ಪದಾರ್ಥಗಳನ್ನು ಈ ರೀತಿ ಸುರಕ್ಷಿತವಾಗಿ ಇಡುವ ಅನಿವಾರ್ಯತೆ ಎದುರಾಗಬಾರದು ಎಂದು ಸರ್ಕಾರಕ್ಕೆ ಅರಿವು ಮೂಡಿಸಲು ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.