ಶಿವಮೊಗ್ಗ: ಶಿವಮೊಗ್ಗದ ನೂತನ ವಿಮಾನ ನಿಲ್ದಾಣದಲ್ಲಿ ಇನ್ನೊಂದು ವಾರದಲ್ಲಿ ವಿಮಾನಯಾನ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಇಂಡಿಗೋ ಏರ್ ಲೈನ್ಸ್ ಜೊತೆಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಶಿವಮೊಗ್ಗ -ಬೆಂಗಳೂರು ನಡುವೆ ಪ್ರತಿ ದಿನ ಇಂಡಿಗೋ ಏರ್ ಲೈನ್ಸ್ ಸಂಚಾರ ನಡೆಸಲು ಒಪ್ಪಿಗೆ ಸೂಚಿಸಿದೆ.
ಸಂಸದ ಬಿ.ವೈ. ರಾಘವೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು, ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುವ ಮೊದಲೇ ಸ್ಟಾರ್ ಏರ್ಲೈನ್ಸ್ ಮತ್ತು ಇಂಡಿಗೋ ಏರ್ಲೈನ್ಸ್ ಜೊತೆಗೆ ಚರ್ಚೆ ನಡೆಸಿದ್ದು, ಶಿವಮೊಗ್ಗದಿಂದ ಬೆಂಗಳೂರು, ದೆಹಲಿ, ಮುಂಬೈಗೆ ಸಂಚಾರ ಸೇವೆ ಒದಗಿಸುವ ಭರವಸೆ ದೊರೆತಿತ್ತು. ಈಗ ಇಂಡಿಗೋ ಏರ್ಲೈನ್ಸ್ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದ್ದು, ಉಡಾನ್ ಯೋಜನೆ ಅಡಿ ಪ್ರತಿ ಪ್ರಯಾಣಿಕರಿಗೆ ಸರ್ಕಾರ 500 ರೂ.ನಂತೆ ದಿನಕ್ಕೆ 72,000 ರೂ. ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಶೀಘ್ರವೇ ಪ್ರಯಾಣ ದರ ಮತ್ತು ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಬೇರೆ ಊರುಗಳಿಗೂ ಸಂಚಾರ ಸೇವೆ ಆರಂಭಿಸಲಾಗುತ್ತದೆ. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಅತ್ಯಾಧುನಿಕ ಅಗ್ನಿಶಾಮಕ ದಳದ ಮೂರು ವಾಹನಗಳ ಖರೀದಿ ಮಾಡಲಾಗಿದೆ. ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಸಂಸದರು ತಿಳಿಸಿದ್ದಾರೆ.