
ಭಾರತೀಯ ಸೈನಿಕರೊಂದಿಗೆ ವಿವಾದಿತ ಭೂಪ್ರದೇಶ ಗಲ್ವಾನ್‌ನಲ್ಲಿ ಸೆಣಸಾಡಿದ್ದ ತನ್ನ ಯೋಧರಿಗೆ ಚಳಿಗಾಲದ ಒಲಿಂಪಿಕ್ಸ್‌ನ ಟಾರ್ಚ್ ಹಿಡಿದು ಓಡಲು ನೇಮಿಸಿದ ವಿಚಾರವಾಗಿ ಚೀನಾ ಸ್ಪಷ್ಟನೆ ಕೊಟ್ಟಿದ್ದು, ತನ್ನ ಈ ಆಯ್ಕೆಯಲ್ಲಿ ಯಾವುದೇ ರೀತಿಯ ಶಿಷ್ಟಾಚಾರದ ಉಲ್ಲಂಘನೆ ಆಗಿಲ್ಲ ಎಂದಿದೆ.
ಕೀ ಫಬಾವೋ ಹೆಸರಿನ ಈತ ಪಿಎಲ್‌ಎ ಯೋಧನಾಗಿದ್ದು, ರೆಜಿಮೆಂಟಲ್ ಕಮಾಂಡರ್ ಸಾಮರ್ಥ್ಯದಲ್ಲಿ ಕರ್ತವ್ಯದಲ್ಲಿದ್ದಾರೆ. ಜೂನ್ 2020ರಂದು ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ನಡೆದಿದ್ದ ಸಂಘರ್ಷದಲ್ಲಿ ಈತ ಭಾರತೀಯ ಯೋಧರ ಪ್ರತಿದಾಳಿಯಿಂದ ಗಾಯಗೊಂಡಿದ್ದ.
ಫಬಾವೋ ಕೈಯಲ್ಲಿ ಕೂಟದ ಉದ್ಘಾಟನಾ ಸಮಾರಂಭದ ವೇಳೆ ಟಾರ್ಚ್ ಕೊಟ್ಟಿದ್ದನ್ನು ವಿರೋಧಿಸಿರುವ ಭಾರತ, ಈ ಸಮಾರಂಭವನ್ನು ಬಹಿಷ್ಕರಿಸಿದೆ. ಚೀನಾದ ಈ ನಡೆಯು ತೀರಾ ವಿಷಾದನೀಯ ಎಂದು ಭಾರತ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಕ್ಚಿ ಖಂಡಿಸಿದ್ದಾರೆ.
ಬಡವರಿಗೆ ಸಹಾಯ ಮಾಡುವರಾರು…? ಪ್ರಧಾನಿ ವಿರುದ್ಧ ಪ್ರಿಯಾಕ ಗಾಂಧಿ ವಾಗ್ದಾಳಿ..!
ಈ ಸಮಾರಂಭವನ್ನು ರಾಜಕೀಯಗೊಳಿಸಲು ಚೀನಾ ಮುಂದಾಗಿದ್ದು, ಉದ್ಘಾಟನಾ ಸಮಾರಂಭವನ್ನು ಭಾರತ ರಾಜತಾಂತ್ರಿಕವಾಗಿ ಬಹಿಷ್ಕರಿಸುತ್ತಿರುವ ಕಾರಣ, ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಾರ್ಯಾಲಯದ ಅಧಿಕಾರಿಗಳು ಸಮಾರಂಭಕ್ಕೆ ಹೋಗುವುದಿಲ್ಲ ಎಂದು ಬಕ್ಚಿ ತಿಳಿಸಿದ್ದಾರೆ.
ದಶಕಗಳಲ್ಲಿಯೇ ಅತ್ಯಂತ ಗಂಭೀರವಾದ ಮಿಲಿಟರಿ ಸಂಘರ್ಷವೊಂದಕ್ಕೆ ಸಾಕ್ಷಿಯಾದ ಗಲ್ವಾನ್ ಕದನದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ, ತನ್ನ ಐವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಕಳೆದ ವರ್ಷದ ಫೆಬ್ರವರಿಯಲ್ಲಿ ಚೀನಾ ಅಧಿಕೃತವಾಗಿ ಒಪ್ಪಿಕೊಂಡಿತ್ತು. ಆದರೂ ಸಹ ಚೀನಾದ ಇನ್ನಷ್ಟು ಯೋಧರು ಈ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಸಂದರ್ಭದಲ್ಲಿ, ಚೀನಾದ ಸಂಘರ್ಷಪೀಡಿತ ಶಿಂಜ಼ಿಯಾಂಗ್‌ನಲ್ಲಿ ಆಯ್ಘರ್ ಮುಸ್ಲಿಮರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಆಪಾದಿಸಿ ಅಮೆರಿಕ, ಐರೋಪ್ಯ ಒಕ್ಕೂಟ ಹಾಗೂ ಪಾಶ್ಚಾತ್ಯ ಜಗತ್ತಿನ ಅನೇಕ ದೇಶಗಳು ಕೂಟಕ್ಕೆ ಬಹಿಷ್ಕಾರ ಹಾಕಿವೆ.