ಬದನೆಕಾಯಿ ಎಣ್ಣೆಗಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದನ್ನು ಮಾಡುವುದು ತುಂಬಾ ಕಷ್ಟವೆಂದುಕೊಳ್ಳುವವರು ಒಮ್ಮೆ ಈ ರೀತಿಯಾಗಿ ಮಾಡಿಕೊಂಡು ಸವಿದು ನೋಡಿ.
3 ಸಣ್ಣ ಗಾತ್ರದ ಟೊಮೆಟೊ ಹಣ್ಣನ್ನು ಎರಡು ಭಾಗವಾಗಿ ಮಾಡಿಕೊಂಡು ಅದರ ಬೀಜವನ್ನೆಲ್ಲಾ ತೆಗೆದು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. 1 ಹದ ಗಾತ್ರದ ಈರುಳ್ಳಿಯನ್ನು ಕತ್ತರಿಸಿಕೊಳ್ಳಿ. ಹಾಗೇ ಒಂದು ಪ್ಯಾನ್ ಗೆ 2 ಟೇಬಲ್ ಸ್ಪೂನ್ ಕಡಲೆಬೀಜ ಹಾಕಿ ಹುರಿದುಕೊಳ್ಳಿ.
ನಂತರ ಅದೇ ಪ್ಯಾನ್ ಗೆ 1 ಟೀ ಸ್ಪೂನ್ ಎಳ್ಳು ಹಾಕಿ ಚಟಪಟ ಅನ್ನುವಾಗ ತೆಗೆಯಿರಿ. ನಂತರ ಈ ಎರಡನ್ನೂ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಬೌಲ್ ಗೆ 1 ಟೇಬಲ್ ಸ್ಪೂನ್ ಧನಿಯಾ ಪುಡಿ, 1 ಟೀ ಸ್ಪೂನ್ ನಷ್ಟು ಖಾರದಪುಡಿ, 1 ಟೀ ಸ್ಪೂನ್ ಗರಂ ಮಸಾಲ ಹಾಗೇ ಪುಡಿ ಮಾಡಿಟ್ಟುಕೊಂಡ ಕಡಲೆಬೀಜದ ಮಿಶ್ರಣವನ್ನು ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ.
ಒಂದು ಬಾಣಲೆಗೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ 6 ಬದನೆಕಾಯಿಯನ್ನು ಮಧ್ಯಕ್ಕೆ ನಾಲ್ಕು ಭಾಗವಾಗಿ ಸೀಳಿಕೊಂಡು ಬಾಣಲೆಗೆ ಹಾಕಿ 5 ನಿಮಿಷಗಳ ಕಾಲ ಹುರಿದುಕೊಳ್ಳಿ. ನಂತರ ಇದು ತಣ್ಣಗಾದ ಮೇಲೆ ಮಾಡಿಟ್ಟುಕೊಂಡ ಮಿಶ್ರಣವನ್ನು ಬದನೆಕಾಯಿ ಒಳಗೆ ತುಂಬಿ. ಉಳಿದ ಮಸಾಲೆ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಕುಕ್ಕರ್ ಗೆ 1 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕರಿಬೇವು, ಈರುಳ್ಳಿ ಹಾಕಿ. ಈರುಳ್ಳಿ ಮೆತ್ತಗಾದ ಮೇಲೆ ರುಬ್ಬಿಟ್ಟುಕೊಂಡ ಟೊಮೆಟೊ ರಸ ಸೇರಿಸಿ. ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಆಮೇಲೆ ಮಸಾಲೆ ಮಿಶ್ರಣ ಸೇರಿಸಿ 5 ನಿಮಿಷಗಳ ಕಾಲ ಮಿಕ್ಸ್ ಮಾಡಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಂತರ ಬದನೆಕಾಯಿ ಸ್ವಲ್ಪ ಬೆಲ್ಲ ಹಾಕಿ ಮುಚ್ಚಳ ಮುಚ್ಚಿ 1 ವಿಷಲ್ ಕೂಗಿಸಿಕೊಳ್ಳಿ.