ಕಟ್ಲೆಟ್ ಎಂದ ಕೂಡಲೇ ಅನೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವಿವಿಧ ಕಟ್ಲೆಟ್ ಗಳ ರುಚಿ ಸವಿದವರಿಗೆ ವಿಶೇಷವಾದ ಬಾಳೆಕಾಯಿ ಕಟ್ಲೆಟ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಬಾಳೆಕಾಯಿ -4, ಆಲೂಗಡ್ಡೆ – ಅರ್ಧ ಕೆ.ಜಿ., ಈರುಳ್ಳಿ -4, ಹಸಿಶುಂಠಿ – ಚೂರು, ಕೊತ್ತಂಬರಿ ಸೊಪ್ಪು –ಸ್ವಲ್ಪ, ಹಸಿಮೆಣಸಿನಕಾಯಿ – 10, ಮೆಣಸಿನ ಪುಡಿ -1 ಚಮಚ, ಗರಂ ಮಸಾಲೆ ಪುಡಿ -2 ಚಮಚ, ಜೀರಿಗೆ – ಅರ್ಧ ಚಮಚ, ಒಣ ಮಾವಿನಕಾಯಿ ಪುಡಿ – ಅರ್ಧ ಚಮಚ, ಕಾಳು ಮೆಣಸಿನ ಪುಡಿ – ಅರ್ಧ ಚಮಚ, ಒಣಗಿದ ಬ್ರೆಡ್ ಚೂರು – 6 ಚಮಚ, ಮೈದಾಹಿಟ್ಟು -2 ಚಮಚ, ಜೋಳದ ಹಿಟ್ಟು – 4 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – ಕರಿಯಲು ಬೇಕಾದಷ್ಟು.
ತಯಾರಿಸುವ ವಿಧಾನ :
ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದುಕೊಂಡು ನೀರು ಹಾಕಿ ಒಲೆಯ ಮೇಲಿಟ್ಟು ಬೇಯಿಸಿರಿ. ಬೆಂದ ಬಳಿಕ ಸಿಪ್ಪೆ ಬಿಡಿಸಿಕೊಂಡು ಹಿಚುಕಿ ಪುಡಿ ಮಾಡಿ. ಬಾಳೆಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು, ಸಿಪ್ಪೆ ತೆಗೆಯದೇ ಬೇಯಿಸಿಕೊಳ್ಳಿರಿ.
ತಣ್ಣಗಾದ ಬಳಿಕ ಸಿಪ್ಪೆ ಬಿಡಿಸಿಕೊಂಡು ಚಾಕುವಿನಿಂದ ಸಣ್ಣ ಚೂರುಗಳಾಗಿ ಮಾಡಿಕೊಳ್ಳಿ. ಹಸಿಮೆಣಸು, ಈರುಳ್ಳಿ ಕತ್ತರಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಒಲೆಯ ಮೇಲೆ ಇಡಿ.
ಎಣ್ಣೆ ಕಾದ ಬಳಿಕ ಜೀರಿಗೆ, ಕತ್ತರಿಸಿದ ಹಸಿ ಮೆಣಸಿನ ಕಾಯಿ, ಹಸಿ ಶುಂಠಿ, ಹಾಕಿ ಕಲೆಸಿರಿ. ಸ್ವಲ್ಪ ಸಮಯದ ಬಳಿಕ ಈರುಳ್ಳಿಯನ್ನು ಹಾಕಿರಿ. ಕೆಂಪಗೆ ಆದ ಬಳಿಕ ಕತ್ತರಿಸಿದ ಬಾಳೆಕಾಯಿ, ಪುಡಿ ಮಾಡಿದ ಆಲೂಗಡ್ಡೆ ಹಾಕಿ ಕಲೆಸಿರಿ.
ಬಳಿಕ ಉಪ್ಪು, ಗರಂ ಮಸಾಲೆ ಪುಡಿ, ಕಾಳು ಮೆಣಸಿನ ಪುಡಿ, ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು ಹಾಕಿರಿ. ಮಿಶ್ರಣ ಮಾಡಿಕೊಂಡು ಕೆಳಗೆ ಇಳಿಸಿ. ಅದಕ್ಕೆ ಒಣ ಮಾವಿನಕಾಯಿ ಪುಡಿ, ಮೈದಾಹಿಟ್ಟು, ಅರ್ಧದಷ್ಟು ಬ್ರೆಡ್ ಚೂರು ಹಾಕಿ ಚೆನ್ನಾಗಿ ಕಲೆಸಿ ಉಂಡೆ ಮಾಡಿಕೊಳ್ಳಿ.
ಅದನ್ನು ಜೋಳದ ಹಿಟ್ಟಿನಲ್ಲಿ ಮತ್ತು ಉಳಿದ ಬ್ರೆಡ್ ಚೂರುಗಳಲ್ಲಿ ಹೊರಳಿಸಿರಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಡಿ. ಕಾದ ಬಳಿಕ ಉಂಡೆಗಳನ್ನು ಹಾಕಿ ಕರಿಯಿರಿ. ಬಾಳೆಕಾಯಿ ಕಟ್ಲೆಟ್ ರುಚಿಯನ್ನು ಸವಿಯಿರಿ.