ರಾಜಸ್ಥಾನ ಪೊಲೀಸರು ನಾಪತ್ತೆಯಾಗಿರುವ 10 ಲಕ್ಷ ರೂಪಾಯಿ ಮೌಲ್ಯದ ಇಲಿ ಹುಡುಕುತ್ತಿದ್ದಾರೆ. ವಿಲಕ್ಷಣ ಪ್ರಕರಣವೊಂದರಲ್ಲಿ ಕಳ್ಳತನವಾಗಿರುವ ಅಥವಾ ನಾಪತ್ತೆಯಾಗಿದೆ ಎನ್ನಲಾದ ‘ಇಲಿ’ಯ ಹುಡುಕಾಟದಲ್ಲಿ ರಾಜಸ್ಥಾನ ಪೊಲೀಸರು ತೊಡಗಿದ್ದಾರೆ.
ಈ ಪ್ರಕರಣದ ದೂರುದಾರರಾದ ಮಂಗು(62) ಎಂಬುವರು ಬನಸವಧ ಜಿಲ್ಲೆಯ ಸಜ್ಜನಗಡ ಪೊಲೀಸ್ ಠಾಣಾ ವ್ಯಾಪ್ತಿಯ ಪಡ್ಲ ವಡ್ಕಿಯ ಗ್ರಾಮದ ದನಗಾಹಿಯಾಗಿದ್ದಾರೆ. ತನ್ನ ಮುದ್ದಿನ ಇಲಿ 700 ಗ್ರಾಂ ತೂಕವಿದ್ದು, ಸೆ.28 ರಂದು ಯಾರೋ ಕೊಂಡೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದು ಝೌ ಎಂದು ಕರೆಯಲ್ಪಡುವ ಅಪರೂಪದ ಇಲಿಯ ಪ್ರಬೇಧವಾಗಿದ್ದು, ಅರಣ್ಯದಲ್ಲಿ ಪತ್ತೆಯಾದ ಇದರ ಬೆಲೆ ಸುಮಾರು 10 ಲಕ್ಷ ರೂ. ಆಗಿದೆ. ಇಲಿಯನ್ನು ತನ್ನ ಸಂಬಂಧಿ ಕದ್ದೊಯ್ದಿರಬಹುದು. ತಮ್ಮ ಸೋದರಳಿಯ ಸುರೇಶನ ಮಗ ಮೊಗಖಿಹುರಿ ತನ್ನ ಸ್ನೇಹಿತರೊಂದಿಗೆ ತನ್ನ ಮನೆಗೆ ಬಂದು ಇಲಿ ಬಗ್ಗೆ ವಿಚಾರಿಸಿದ್ದ. ಸ್ವಲ್ಪ ಸಮಯದ ನಂತರ ಇಲಿಯನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರಿನ ಬಳಿಕ ಪೊಲೀಸರು ಇಲಿ ಕಳ್ಳತನ ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾಗಿರುವ ಇಲಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಸಜ್ಜನಗಢ ಎಸ್ಹೆಚ್ಒ ಧನಪತ್ ಸಿಂಗ್ ತಿಳಿಸಿದ್ದಾರೆ. ಒಂದು ಇಲಿ ಬೆಲೆ ಸುಮಾರು 10 ಲಕ್ಷ ರೂಪಾಯಿ ಎಂದು ದೂರು ನೀಡಿದ್ದು, ಇದನ್ನು ಕದ್ದು ಹಣಕ್ಕಾಗಿ ಮಾರಾಟ ಮಾಡಿರಬಹುದು ಎಂಬ ಶಂಕೆ ಇದ್ದು, ತನಿಖೆಯ ನಂತರ ಇದರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.