
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಯ ನಡುವೆ ಅಮರನಾಥ ಯಾತ್ರೆಯ ಬಗ್ಗೆ ಬಾಬಾ ಬರ್ಫಾನಿ ಭಕ್ತರಲ್ಲಿ ಉತ್ಸಾಹ ಕಂಡುಬರುತ್ತಿದೆ. ಕಳೆದ 10 ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಭಕ್ತರು ಬಾಬಾ ಬರ್ಫಾನಿಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಅಮರನಾಥ ಯಾತ್ರೆಯಲ್ಲಿ ಅಮೇರಿಕಾದ ತಾಯಿ-ಮಗ ಭಾಗಿಯಾಗಿದ್ದಾರೆ. ತಾಯಿ ಹೀದರ್ ಹ್ಯಾಥ್ವೇ ತನ್ನ ಮಗ ಹಡ್ಸನ್ ಹ್ಯಾಥ್ವೇ ಜೊತೆ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ.
ಅನೇಕ ವರ್ಷಗಳಿಂದ ಅಮರನಾಥ ಯಾತ್ರೆ ಕೈಗೊಳ್ಳುವ ಕನಸು ಹೊಂದಿದ್ದೆ. ಭಾರತ ಸರ್ಕಾರ ಮತ್ತು ಶ್ರೈನ್ ಬೋರ್ಡ್‌ನಿಂದ ಇದು ಸಾಧ್ಯವಾಯ್ತು. ನಾನು ಇಲ್ಲಿಗೆ ಬಂದು ಖುಷಿಯಾಗಿದ್ದೇನೆ. ಸಂತೋಷದಲ್ಲಿ ಮುಳುಗಿದ್ದೇನೆ ಎಂದು ಹೀದರ್ ಹಾಥ್ವೇ ಹೇಳಿದ್ದಾರೆ.
ಮಂಗಳವಾರ ಮುಂಜಾನೆ 5,400 ಕ್ಕೂ ಹೆಚ್ಚು ಯಾತ್ರಾರ್ಥಿಗಳ ಹೊಸ ಬ್ಯಾಚ್ ಜಮ್ಮು ಮತ್ತು ಕಾಶ್ಮೀರದ ಎರಡು ಮೂಲ ಶಿಬಿರಗಳಿಗೆ ಹೊರಟಿದೆ. ಇನ್ನು ಸೋಮವಾರ ಸಂಜೆ 3,880 ಮೀಟರ್ ಎತ್ತರದಲ್ಲಿರುವ ಗುಹಾ ದೇವಾಲಯದಲ್ಲಿ ಬಾಬಾ ಬರ್ಫಾನಿಗೆ ಭೇಟಿ ನೀಡಿದ ಯಾತ್ರಾರ್ಥಿಗಳ ಸಂಖ್ಯೆ 2,07,016 ತಲುಪಿದೆ. 213 ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ 5,433 ಯಾತ್ರಾರ್ಥಿಗಳ 12ನೇ ತಂಡವು ಭಗವತಿ ನಗರದ ಮೂಲ ಶಿಬಿರದಿಂದ ಬೆಳಗಿನ ಜಾವ 3.13ಕ್ಕೆ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದ್ರಲ್ಲಿ 1,117 ಮಹಿಳೆಯರು ಮತ್ತು 18 ಮಕ್ಕಳು ಸೇರಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜೂನ್ 28 ರಂದು ಅಮರನಾಥ ಯಾತ್ರಿಕರ ಮೊದಲ ಬ್ಯಾಚ್‌ಗೆ ಧ್ವಜಾರೋಹಣ ಮಾಡಿದ್ದರು. ಅಂದಿನಿಂದ, ಜಮ್ಮು ಮೂಲ ಶಿಬಿರದಿಂದ ಒಟ್ಟು 67,698 ಯಾತ್ರಿಕರು ಕಣಿವೆಗೆ ತೆರಳಿದ್ದಾರೆ. 52 ದಿನಗಳ ಯಾತ್ರೆಯು ಜೂನ್ 29 ರಂದು ಕಾಶ್ಮೀರದ ಎರಡು ಮೂಲ ಶಿಬಿರಗಳಿಂದ ಔಪಚಾರಿಕವಾಗಿ ಪ್ರಾರಂಭವಾಗಿದೆ. ಈ ಯಾತ್ರೆ ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.