
ಹರ್ಯಾಣದ ಹಳ್ಳಿಯೊಂದರಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮಹಿಳೆ ಮತ್ತು ಆಕೆಯ ಮಗ ಮೃತಪಟ್ಟಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಕುರುಕ್ಷೇತ್ರ ಪಟ್ಟಣದಿಂದ ಸುಮಾರು 20 ಕಿಮೀ ದೂರದಲ್ಲಿರುವ ಖಿಡ್ಕಿ ವಿರಾನ್ ಗ್ರಾಮದಲ್ಲಿ ಸರೋಜ್(52) ಮತ್ತು ಅವರ ಮಗ ರಮಣ್ ಸೈನಿ(28) ತಮ್ಮ ಸಾಸಿವೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಶನಿವಾರ ಈ ಘಟನೆ ಸಂಭವಿಸಿದೆ ಎಂದು ಬಬೈನ್ ಪೊಲೀಸ್ ಠಾಣೆ ಎಸ್‌ಹೆಚ್‌ಒ ದಿನೇಶ್ ರಾಣಾ ತಿಳಿಸಿದ್ದಾರೆ.
ಸಿಡಿಲು ಬಡಿದಾಗ ಇಬ್ಬರೂ ಸ್ಥಳದಲ್ಲೇ ಪ್ರಜ್ಞಾಹೀನರಾದರು. ಸಮೀಪದ ಮತ್ತೊಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಬಲ್ವಂತ್ ಅವರು ನೆರವಿಗೆ ಯಾಚಿಸಿದಾಗ ದಾರಿಹೋಕರು ಮತ್ತು ಸ್ಥಳೀಯರು ಅವರ ಸಹಾಯಕ್ಕೆ ಧಾವಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ತಾಯಿ-ಮಗ ಇಬ್ಬರನ್ನು ವೈದ್ಯರ ಬಳಿಗೆ ಕರೆದೊಯ್ದರು, ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹರಿಯಾಣ ಮತ್ತು ಪಂಜಾಬ್‌ನ ಹಲವು ಭಾಗಗಳಲ್ಲಿ ಶನಿವಾರ ಗುಡುಗು ಸಹಿತ ಭಾರೀ ಮಳೆಯಾಗಿದೆ.