
ಭುವನೇಶ್ವರ: ಒಡಿಶಾದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದ್ದು, ತಾಯಿ ಮತ್ತು ಮಗ ಇಬ್ಬರೂ ಒಟ್ಟಿಗೆ ಪರೀಕ್ಷೆ ಬರೆದ ಅಪರೂಪದ ಘಟನೆ ನಡೆದಿದೆ. ಈ ಮೂಲಕ ಕಲಿಕೆಗೆ ಯಾವುದೇ ಸಂಕೋಲೆಗಳಿಲ್ಲ ಎಂದು ತೋರಿಸಿದ್ದಾರೆ.
ಮಗನೊಟ್ಟಿಗೆ ಪರೀಕ್ಷೆ ಬರೆಯಲು ಮುಂದಾದ ತಾಯಿಯೇ ಜ್ಯೋಸ್ನಾ ಪಾಧಿ (36). ಕೋವಿಡ್ ವೇಳೆ ಮಗ ಮನೆಯಲ್ಲೇ ಆನ್ ಲೈನ್ ನಲ್ಲಿ 10 ನೇ ತರಗತಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವುದನ್ನು ಕಂಡು ಆಕೆಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಕನಸು ಚಿಗುರೊಡೆಯಿತು.
BREAKING: ಸೋಮವಾರವೇ ರಂಜಾನ್ ರಜೆ ಘೋಷಿಸಿದ ಸರ್ಕಾರ
ಕೋರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದ ಜೇಪೋರ್ ಬ್ಲಾಕ್‌ನ ಪೂಜಾರಿಪುಟ್ ಗ್ರಾಮದವರಾದ ಜೋಸ್ನಾ ಅವರು ಕುಟುಂಬದ ಸಮಸ್ಯೆಗಳಿಂದ ಓದನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ. ಪತಿ ತ್ರಿನಾಥ್ ಪಾತ್ರ ಪೂಜಾರಿಪುಟ್ ಗ್ರಾಮದಲ್ಲಿ ಪುಟ್ಟದೊಂದು ಅಂಗಡಿ ನಡೆಸುತ್ತಿದ್ದಾರೆ.
ಮದುವೆಯಾದ 15 ವರ್ಷಗಳ ಬಳಿಕ ಪರೀಕ್ಷೆ ಹಾಜರಾಗುತ್ತಿರುವ ಕಾರಣ ಬಹಳ ಉತ್ಸುಕಳಾಗಿದ್ದೇನೆ. ನನ್ನ ಪತಿ ಬಹಳ ಬೆಂಬಲ ನೀಡುತ್ತಿದ್ದಾರೆ. ಲಾಕ್ ಡೌನ್ ವೇಳೆ ಮಗ ನನ್ನ ಮೊಬೈಲ್ ತೆಗೆದುಕೊಂಡು ಆನ್ ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ. ನಾನು ಆತನಿಗೆ ಯಾವುದೇ ತರಗತಿಗಳನ್ನು ತಪ್ಪಿಸದಂತೆ ಎಚ್ಚರ ವಹಿಸುತ್ತಿದ್ದೆ. ಆಗ ನನಗೂ ಓದಬೇಕೆಂಬ ಹಂಬಲ ಹೆಚ್ಚಾಯಿತು ಎಂದು ಹೇಳುತ್ತಾರೆ ಜೋಸ್ನಾ.