ಫರಿದಾಬಾದ್: ಇತ್ತೀಚಿನ ದಿನಗಳಲ್ಲಿ ಹೆತ್ತ ತಾಯಂದಿರೇ ಮಕ್ಕಳಿಗೆ ಮನಬಂದಂತೆ ಥಳಿಸಿ, ಚಿತ್ರಹಿಂಸೆ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೆಲ ದಿನಗಳ ಹಿಂದಷ್ಟೇ ತಾಯಿಯೊಬ್ಬಳು ಮಗುವಿನ ಮೇಲೆ ಸೌಟಿನಿಂದ ಹಲ್ಲೆ ನಡೆಸಿರುವ ಘಟನೆ ವೈರಲ್ ಆಗಿತ್ತು. ಈ ಘಟನೆ ಮಾಸುವ ಮುನ್ನವೇ ಇಲ್ಲೋರ್ವ ಮಹಾತಾಯಿ ತನ್ನ ಮಗನನ್ನು ಮನಬಂದಂತೆ ಥಳಿಸಿ, ಆತನ ಎದೆ ಮೇಲೆ ಕುಳಿತು ಚಿತ್ರಹಿಂಸೆ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹರಿಯಾಣದ ಫರಿದಾಬಾದ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. 11 ವರ್ಷದ ಮಗನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ತಾಯಿ, ಕಾಲಿನಿಂದ ಜಾಡಿಸಿ ಒದ್ದಿದ್ದಾಳೆ. ಅಲ್ಲದೇ ಆತನ ಎದೆ ಮೇಲೆ ಕುಳಿತು ಕಪಾಳಕ್ಕೆ ಮನಬಂದಂತೆ ಹೊಡೆಯುತ್ತಿದ್ದಾಳೆ. ತಾಯಿಯೊಬ್ಬಳ ಮೃಗೀಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಗನ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಗನನ್ನು ಥಳಿಸಿದ್ದನ್ನು ಖಂಡಿಸಿದ್ದಕ್ಕೆ ಪತ್ನಿ ಮಗನಿಗೆ ವಿಷಕೊಟ್ಟು, ತಾನೂ ಆತ್ಮಹತ್ಯೆ ಮಡಿಕೊಳ್ಳುವ ಬೆದರಿಕೆ ಹಾಕಿದ್ದಾಳೆ. ಮಗನಿಗೆ ಆಟ, ಪೇಂಟಿಂಗ್ ಬೇರೆ ಯಾವುದೇ ಚಟುವಟಿಕೆಗೂ ಅವಕಾಶ ನೀಡದೇ ಕೇವಲ ಓದು ಓದು ಎಂದು ಒತ್ತಡ ಹೇರಿ ಹಿಂಸೆ ನೀಡುತ್ತಿದ್ದಾಳೆ ಎಂದು ದೂರು ನೀಡಿದ್ದಾರೆ.
ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಮಹಿಳೆ ಮಗನ್ನು ಕರೆದುಕೊಂಡು ತವರು ಮನೆ ಸೇರಿದ್ದಾಳೆ. ಇನ್ನೊಂದೆಡೆ ಹಲ್ಲೆಗೊಳಗಾದ 11 ವರ್ಷದ ಬಾಲಕ ತನ್ನ ತಂದೆ ಓರ್ವ ವ್ಯಸನಿ ಎಂದು ಮಕ್ಕಳ ಕಲ್ಯಾಣ ಸಮಿತಿಗೆ ತಂದೆ ವಿರುದ್ಧ ದೂರು ನೀಡಿದ್ದಾನೆ. ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸೂರಜ್ ಕುಂಡ್ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದು, ಸತ್ಯಾಸತ್ಯತೆ ಇನ್ನಷ್ಟೇ ಹೊರಬರಬೇಕಿದೆ.