ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟ ಬಳಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇಬ್ಬರು ಮಕ್ಕಳ ಜೊತೆಗೆ ವಿಸಿ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಮಕ್ಕಳು ನೀರು ಪಾಲಾಗಿದ್ದಾರೆ. ಸ್ಥಳೀಯರು ತಾಯಿಯನ್ನು ರಕ್ಷಣೆ ಮಾಡಿದ್ದಾರೆ.
ತಾಯಿ ವಿದ್ಯಾ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ. 8 ವರ್ಷದ ಲಿತಿಷಾ, 2 ವರ್ಷದ ಕಿಶನ್ ನಾಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಕೌಟುಂಬಿಕ ಕಲಹದಿಂದ ವಿದ್ಯಾ ಮಕ್ಕಳೊಂದಿಗೆ ನಾಲೆಗೆ ಹಾರಿದ್ದಾರೆ ಎನ್ನಲಾಗಿದೆ.
ಆದರೆ, ಇದನ್ನು ಅವರು ಅಲ್ಲಗಳೆದಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವಾಗ ಮಗಳ ಲಿತಿಷಾ ನಾಲೆಗೆ ಬಿದ್ದಿದ್ದಾಳೆ. ಮಗಳ ರಕ್ಷಣೆಗೆ ತಾಯಿ ವಿದ್ಯಾ ನಾಲೆಗೆ ಹಾರಿದ್ದು, ತಾಯಿ ಹಾರಿದ್ದಕ್ಕೆ 2 ವರ್ಷದ ಕಿಶನ್ ಕೂಡ ನಾಲೆಗೆ ಬಿದ್ದಿದ್ದಾನೆ. ಸ್ಥಳೀಯರು ನನ್ನನ್ನು ರಕ್ಷಿಸಿದ್ದಾರೆ. ಮಕ್ಕಳು ಕೊಚ್ಚಿ ಹೋದರು ಎಂದು ಪೊಲೀಸರಿಗೆ ತಾಯಿ ವಿದ್ಯಾ ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.