
ವಿಜಯಪುರ: ದಂಪತಿಯ ಜಗಳ ಬಿಡಿಸಲು ಬಂದ ಅತ್ತೆಯನ್ನು ಅಳಿಯ ಭೀಕರವಾಗಿ ಕೊಲೆ ಮಾಡಿ ನಂತರ ಶವವನ್ನು ಕಾಲುವೆಗೆ ಎಸೆದ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ.
ಶಿರಶ್ಯಾಡ ಗ್ರಾಮದ ಗೌರಬಾಯಿ ಈರಣ್ಣ ನರಳಿ(65) ಕೊಲೆಯಾದ ಮಹಿಳೆ. ಭೀಮಪ್ಪ ಅತ್ತೆಯನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಗೌರ ಬಾಯಿ ಪುತ್ರಿ ದೇವಕಿಯನ್ನು ಭೀಮಪ್ಪ ಮದುವೆಯಾಗಿದ್ದ. ದಿನವೂ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಅತ್ತೆ ಗೌರಬಾಯಿ ಇಬ್ಬರಿಗೂ ಬುದ್ಧಿವಾದ ಹೇಳಲು ಮಂಗಳವಾರ ಮನೆಗೆ ಬಂದಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಭೀಮಪ್ಪ ಅತ್ತೆಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಚೀಲದಲ್ಲಿ ಕಟ್ಟಿ ಗ್ರಾಮಕ್ಕೆ ಸಮೀಪದ ಕಾಲುವೆಗೆ ಎಸೆದಿದ್ದಾನೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾನೆ. ನಂತರ ದೇವಕಿ ದೇವರಹಿಪ್ಪರಗಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಬುಧವಾರ ಮಧ್ಯಾಹ್ನ ಶವ ಹೊರ ತೆಗೆದಿದ್ದಾರೆ. ಗ್ರಾಮಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಬರಗಿ, ಎಎಸ್ಪಿ ಶಂಕರ್ ಮರಿಹಾಳ, ಡಿವೈಎಸ್ಪಿ ಜಿ.ಹೆಚ್. ತಳಕಟ್ಟಿ, ತಹಸಿಲ್ದಾರ್ ಪ್ರಕಾಶ ಸಿಂದಗಿ, ಪಿಎಸ್ಐ ಬಸವರಾಜ ತಿಪ್ಪಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.