
ಮುಂಗೇಲಿ ಜಿಲ್ಲೆಯ ಲೋರ್ಮಿಯ ಸರಿಸ್ಟಾಲ್ ಗ್ರಾಮದಲ್ಲಿ ಬರಿ ಮೈಯಲ್ಲಿದ್ದ ನವಜಾತ ಹೆಣ್ಣು ಮಗುವನ್ನು ಹೊಲದಲ್ಲಿ ಎಸೆದು ಹೋಗಲಾಗಿದೆ. ತಾನು ಮನುಷ್ಯರ ಹಾಗೆ ಕ್ರೂರಿಯಲ್ಲ ಎಂಬುದನ್ನು ಸಾಬೀತುಪಡಿಸಿದ ಹೆಣ್ಣು ನಾಯಿಯೊಂದು ಮಗುವನ್ನು ರಕ್ಷಿಸಿ, ತನ್ನ ಮರಿಗಳ ಪಕ್ಕ ಮಲಗಿಸಿದೆ. ರಾತ್ರಿ ಪೂರಾ ಮಗುವಿಗೆ ಕಾವಲಾಗಿ ನಿಂತಿದ್ದು, ಮಮತೆ ಅಂದ್ರೆ ಏನೆಂಬುದನ್ನು ತೋರಿಸಿಕೊಟ್ಟಿದೆ.
ಮಗುವಿನ ಕೂಗು ಕೇಳಿದ ಗ್ರಾಮಸ್ಥರು ಬಂದು ನೋಡಿದಾಗ ನಾಯಿಮರಿಗಳ ಪಕ್ಕದಲ್ಲಿ ಮಗು ಮಲಗಿದ್ದನ್ನು ಗಮನಿಸಿದ್ದಾರೆ. ನಾಯಿ ಮರಿಗಳ ಜೊತೆಗೆ ಯಾವುದೇ ಗಾಯಗಳಿಲ್ಲದೆ ಮಗು ಪತ್ತೆಯಾಗಿದೆ. ಕೂಡಲೇ ಗ್ರಾಮಸ್ಥರು ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯವಾಗಿದೆ. ಮಗುವಿಗೆ ಆಕಾಂಕ್ಷಾ ಎಂದು ಹೆಸರಿಡಲಾಗಿದೆ. ನವಜಾತ ಶಿಶುವಿನ ಕುಟುಂಬಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸುದ್ದಿಯನ್ನು ಓದಿ ಆಘಾತಗೊಂಡಿರುವುದಾಗಿ ತಿಳಿಸಿದ ಅಧಿಕಾರಿ, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಹೆಣ್ಣು, ಗಂಡು ಎಂಬ ಬಗ್ಗೆ ತಾರತಮ್ಯ ಮಾಡಿದವರು, ಮಗುವಿನ ಪೋಷಕರಾಗಲು ಯೋಗ್ಯರಲ್ಲ. ‘ತಪ್ಪಿತಸ್ಥರಿಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕು. ಇಂತಹ ಪಾಪ ಕೃತ್ಯಗಳನ್ನು ಇಲ್ಲಿಗೆ ನಿಲ್ಲಿಸಬೇಕು. ಮಗ ಮತ್ತು ಮಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಅಧಿಕಾರಿ ತನ್ನ ಟ್ವೀಟ್ ನಲ್ಲಿ ತಿಳಿಸಿದ್ದಾರೆ.