
ತನ್ನ ನಾಲ್ವರು ಮಕ್ಕಳನ್ನು ತಾಯಿಯೊಬ್ಬಳು ನೀರು ತುಂಬಿದ್ದ ಡ್ರಮ್ ಒಳಗೆ ಹಾಕಿ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಬಾರ್ಮೆರ್‌ನಲ್ಲಿ ಜರುಗಿದೆ. ಇದೇ ವೇಳೆ, ಮತ್ತೊಂದು ಪ್ರಕರಣದಲ್ಲಿ ರಾಜ್ಯದ ಬಾನ್ಸ್ವಾರಾ ಎಂಬಲ್ಲಿ ತಂದೆಯೊಬ್ಬ ತಮ್ಮ ಒಬ್ಬನೇ ಪುತ್ರನನ್ನು ಖಡ್ಗದಿಂದ ಕೊಂದಿದ್ದಾನೆ.
ಬಾರ್ಮೇರ್‌ನ ಮಂಡಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬನಿಯಾವಾಸ್ ಎಂಬ ಗ್ರಾಮದಲ್ಲಿ ಊರ್ಮಿಳಾ (27) ಎಂಬ ಮಹಿಳೆ ತನ್ನ ಪುತ್ರಿಯರಾದ ಭಾವನಾ (8), ವಿಮಲಾ (3), ಮನಿಷಾ (2) ಹಾಗೂ ಪುತ್ರನಾದ ವಿಕ್ರಮ್ (5)ರನ್ನು ನೀರು ತುಂಬಿದ ಡ್ರಮ್‌ನಲ್ಲಿ ಮುಳುಗಿಸಿ ಸಾಯಿಸಿದ್ದಾರೆ. ಡ್ರಮ್ ಒಳಗೆ ಇವರನ್ನು ಹಾಕಿ ಲಾಕ್ ಮಾಡಿದ್ದರಿಂದ ಮಕ್ಕಳಿಗೆ ಅದರಿಂದ ಹೊರಗೆ ಬರಲು ಆಗಲಿಲ್ಲ.
ಇದರ ಬೆನ್ನಿಗೇ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಊರ್ಮಿಳಾ. ಘಟನೆ ನಡೆದ ವೇಳೆ ಊರ್ಮಿಳಾ ಪತಿ ಜೇಠಾರಾಂ ಮನೆಯಲ್ಲಿ ಇರಲಿಲ್ಲ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಬಾನ್ಸ್ವಾರಾ ಆರ್ಥುನಾ ಬ್ಲಾಕ್ ಎಂಬಲ್ಲಿ ಭನ್ವಾರ್ ಸಿಂಗ್ ಎಂಬ ಹೆಸರಿನ ತಂದೆಯೊಬ್ಬರು ತನ್ನ ಪುತ್ರನನ್ನು ಖಡ್ಗದಿಂದ ಹಲ್ಲೆಗೈದು ಕೊಂದಿದ್ದಾರೆ. ಕೌಟುಂಬಿಕ ಕಲಹದಿಂದ ರೋಸಿ ಹೋಗಿ ಭನ್ವಾರ್ ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಪುತ್ರನನ್ನು ಕೊಂದ ಕೂಡಲೇ ತಾವೇ ಪೊಲೀಸ್ ಠಾಣೆಗೆ ತೆರಳಿದ ಭನ್ವರ್ ಸಿಂಗ್ ಶರಣಾಗತರಾಗಿದ್ದಾರೆ.
ನೆರೆಯ ಗುಜರಾತ್‌ನಲ್ಲಿ ಕೆಲಸಕ್ಕೆಂದು ಹೋಗಿದ್ದ ಭನ್ವಾರ್ ಸಿಂಗ್ ಮನೆಗೆ ಬರುತ್ತಲೇ ಮಗನೊಂದಿಗೆ ಜಗಳವಾಡಿಕೊಂಡಿದ್ದಾರೆ. ಇದರ ಬೆನ್ನಿಗೇ ಪುತ್ರ ನರೇಂದ್ರನನ್ನು ಖಡ್ಗದಲ್ಲಿ ಕೊಂದು ಹಾಕಿದ್ದಾರೆ ಭನ್ವಾರ್ ಸಿಂಗ್.