ಬಿಹಾರದ ಭಾಗಲ್ಪುರದಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬರಿ ರಾಮಾಸಿ ಗ್ರಾಮದಲ್ಲಿ ಕೈಲು ದಾಸ್ (35) ಎಂಬಾತನನ್ನು ಅವರ ಪತ್ನಿ, ಮಗಳು ಹಾಗೂ ಮಗಳ ಪ್ರಿಯಕರ ಸೇರಿ ಕೊಲೆಗೈದು ಮನೆಯಂಗಳದಲ್ಲೇ ಹೂತು ಹಾಕಿದ್ದಾರೆ. ಕೈಲು ದಾಸ್ ಪತ್ನಿ ಸರಿತಾ ದೇವಿ, ಮಗಳು ಜೂಲಿ ಹಾಗೂ ಜೂಲಿಯ ಪ್ರಿಯಕರ ದಿನೇಶ್ ಯಾದವ್ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಕೈಲು ದಾಸ್ ಮತ್ತು ಸರಿತಾ ದೇವಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹಿರಿಯ ಮಗ ದಯಾನಂದ್ ಕುಮಾರ್ ಬಂಕಾ ಜಿಲ್ಲೆಯ ರಾಜೌನ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಕಿರಿಯ ಮಗ ದೇವನಂದನ್ ತಂದೆ – ತಾಯಿಯೊಂದಿಗೆ ವಾಸವಾಗಿದ್ದ. ಕೈಲು ದಾಸ್ ಸಣ್ಣ ಹೋಟೆಲ್ ಹಾಗೂ ದಿನಸಿ ಅಂಗಡಿ ನಡೆಸುತ್ತಿದ್ದು, ಈ ವೇಳೆ ಸರಿತಾ ದೇವಿ ಮತ್ತು ಜೂಲಿ ಹಲವು ಪುರುಷರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ದಿನೇಶ್ ಯಾದವ್ ಕೂಡ ಅವರ ಮನೆಗೆ ಆಗಾಗ ಬರುತ್ತಿದ್ದ. ಇದನ್ನು ಕೈಲು ದಾಸ್ ವಿರೋಧಿಸುತ್ತಿದ್ದು, ಈ ವಿಚಾರಕ್ಕೆ ಗಂಡ – ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಮನೆಯವರೆಲ್ಲಾ ಮಲಗಿದ್ದಾಗ ಕೈಲು ದಾಸ್ ನನ್ನು ಮೂವರು ಸೇರಿ ಹತ್ಯೆಗೈದು ಬಳಿಕ ಮನೆಯಂಗಳದಲ್ಲೇ ಹೂತು ಹಾಕಿದ್ದಾರೆ. ಸೋಮವಾರ ಕೈಲು ದಾಸ್ ಅವರ ಹಿರಿಯ ಮಗ ದಯಾನಂದ್ ಮನೆಗೆ ಬಂದಾಗ ತಂದೆ ಕಾಣೆಯಾಗಿದ್ದರು. ತಾಯಿ ಮತ್ತು ಸಹೋದರಿಯನ್ನು ವಿಚಾರಿಸಿದಾಗ ಅವರಿಂದ ಯಾವುದೇ ಸಮಾಧಾನಕರ ಉತ್ತರ ಸಿಗಲಿಲ್ಲ. ಬಳಿಕ ಗ್ರಾಮಸ್ಥರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ತಂದೆ ನಾಪತ್ತೆಯಾಗಿರುವ ಬಗ್ಗೆ ದಯಾನಂದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದು, ಈ ವಿಷಯ ತಿಳಿದ ಸರಿತಾ ದೇವಿ ಮತ್ತು ಜೂಲಿ ಕೂಡ ಪೊಲೀಸ್ ಠಾಣೆಗೆ ಬಂದಿದ್ದಾರೆ. ಮೂವರು ನಾಪತ್ತೆ ಪ್ರಕರಣ ದಾಖಲಿಸುವಲ್ಲಿ ನಿರತರಾಗಿದ್ದಾಗ ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿ ಕೈಲು ದಾಸ್ ಮನೆಯಂಗಳದಿಂದ ದುರ್ವಾಸನೆ ಬರುತ್ತಿದೆ ಎಂದು ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಗೆದು ನೋಡಿದಾಗ ಕೈಲು ದಾಸ್ ಅವರ ಮೃತದೇಹ ಪತ್ತೆಯಾಗಿದೆ.
ಪೊಲೀಸ್ ಠಾಣೆಯಿಂದ ಹಿಂತಿರುಗುತ್ತಿದ್ದ ತಾಯಿ ಮತ್ತು ಮಗಳನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ದಿನೇಶ್ ಯಾದವ್‌ಗೆ ತಾಯಿ ಮತ್ತು ಮಗಳಿಬ್ಬರ ಜೊತೆ ಅನೈತಿಕ ಸಂಬಂಧವಿತ್ತು. ಮೂವರು ಸೇರಿ ಕೈಲು ಯಾದವ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದಿನೇಶ್ ಯಾದವ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ.