
ಮೊಟೆರಾ ಸ್ಟೇಡಿಯಂ ಇಲ್ಲವೇ ಸರ್ದಾರ್ ವಲ್ಲಭಬಾಯ್ ಸ್ಟೇಡಿಯಂ ಎಂದು ಹೆಸರನ್ನ ಗಳಿಸಿದ್ದ ಈ ಕ್ರೀಡಾಂಗಣವನ್ನ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣಗೊಳಿಸಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಸ್ಟೇಡಿಯಂ ಉದ್ಘಾಟನೆ ಮಾಡಿದ ಬಳಿಕ ಬಿಜೆಪಿ ವಿರೋಧಿಗಳು ಈ ಕ್ರಮವನ್ನ ವ್ಯಾಪಕವಾಗಿ ಖಂಡಿಸುತ್ತಿದ್ದಾರೆ. ಮಾತ್ರವಲ್ಲದೇ ಭಾರತದ ಮೊದಲ ಗೃಹ ಮಂತ್ರಿಗೆ ಮಾಡಿದ ಅಪಮಾನ ಎಂದು ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಈ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. ಈ ಮಣ್ಣಿನಲ್ಲಿ ಒಂದು ವಿಶೇಷ ಶಕ್ತಿ ಇದೆ. ಹೀಗಾಗಿಯೇ ಸಾಕಷ್ಟು ಅಡೆತಡೆಗಳ ನಡುವೆಯೂ ಈ ದೇಶ ಮಹಾನ್ ಆತ್ಮಗಳ ಆವಾಸ ಸ್ಥಾನವಾಗಿದೆ ಎಂದು ಟ್ವೀಟಾಯಿಸಿದ್ದಾರೆ.
ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದು ಸರ್ದಾರ್ ವಲ್ಲಭಬಾಯ್ ಪಟೇಲ್ ಅವರಿಗೆ ಮಾಡಿದ ಅಪಮಾನ ಅಲ್ಲವೇ..? ಸರ್ದಾರ್ ಪಟೇಲ್ ಹೆಸರನ್ನ ಬಳಸಿಕೊಂಡು ಬಿಜೆಪಿ ಮತಯಾಚಿಸಿದೆ. ಆದರೆ ಈಗ ಇದೇ ಸರ್ದಾರ್ ಸಾಹೇಬ್ರಿಗೆ ಅವಮಾನ ಮಾಡಲಾಗಿದೆ. ಗುಜರಾತ್ನ ಜನತೆ ಉಕ್ಕಿನ ಮನುಷ್ಯನಿಗಾದ ಅಪಮಾನವನ್ನ ಸಹಿಸೋದಿಲ್ಲ ಎಂದು ಟ್ವೀಟಾಯಿಸಿದ್ದಾರೆ .
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಈ ಮರುನಾಮಕರಣ ನಿರ್ಧಾರವನ್ನ ಸ್ವಾಗತಿಸಿದ್ದಾರೆ. “ಫಿಟ್ನೆಸ್ ಅನ್ನು ಜನರ ಜೀವನದ ಅಚಲ ಭಾಗವನ್ನಾಗಿ ಮಾಡುವ ಮೂಲಕ ಮತ್ತು ಯೋಗವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವ ಮೂಲಕ, ಇಡೀ ಜಗತ್ತಿಗೆ ಆರೋಗ್ಯಕರವಾಗಿರಲು ಮಂತ್ರವನ್ನು ನೀಡುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಜಿ ಅವರ ಹೆಸರನ್ನು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ನೀಡಲಾಗಿದೆ” ಎಂದು ಜಾವಡೇಕರ್ ಟ್ವೀಟ್ ಮಾಡಿದ್ದಾರೆ.